ಮಂಗಳೂರು: ಉಳ್ಳಾಲ ಮೊಗವೀರ ಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಎಂಬುವವರನ್ನು 2016ರಲ್ಲಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಮೊಹಮ್ಮದ್ ಆಸೀಫ್, ಮೊಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಫ್, ಅಬ್ದುಲ್ ಅಸ್ವೀರ್ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು. ಆರೋಪಿಗಳು 2016 ಎಪ್ರಿಲ್ 12ರ ನಸುಕಿನ ವೇಳೆ 2:30ಸುಮಾರಿಗೆ ರಾಜೇಶ್ ಕೋಟ್ಯಾನ್ ರನ್ನು ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿ ಮರದ ಕಟ್ಟಿಗೆಗಳಿಂದ ಹೊಡೆದು ಮುಖಕ್ಕೆ ಕಲ್ಲು ಹೊತ್ತು ಹಾಕಿ ಜಜ್ಜಿ ಕೊಲೆಗೈದಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಆಸೀಫ್, ಮೊಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಫ್, ಅಬ್ದುಲ್ ಅಸ್ವೀರ್ ಎಂಬವರು ಸೇರಿದಂತೆ ಕಾನೂನಿನ ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ದಸ್ತಗಿರಿ ಮಾಡಿದ್ದರು. ಅಂದಿನ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶೋಕ್ ಪಿ.ಯವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವು 8ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಕೊಲೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಮುಖ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂ ದಂಡ ವಿಧಿಸಿರುತ್ತದೆ. ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಜುಡಿತ್ ಕ್ರಾಸ್ತ ವಾದ ಮಂಡಿಸಿದ್ದಾರೆ.