ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮೂಲ್ಕಿ- ಮೂಡುಬಿದ್ರೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದ್ದಾರೆ. ಅಭ್ಯರ್ಥಿಯಾದ ಬಳಿಕ ಚೌಟ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸಂಚಾರ ನಡೆಸಿದ್ದು, ಹಳೆಯಂಗಡಿ, ಕಿನ್ನಿಗೋಳಿ ಪೇಟೆ ಮತ್ತು ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಸಂಚರಿಸಿ ಅಂಗಡಿ, ಬೀದಿಗಳಲ್ಲಿ ಜನರ ಬಳಿ ಮತಯಾಚನೆ ಮಾಡಿದ್ದಾರೆ.
ಬೆಳಗ್ಗೆ ತೋಕೂರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಬ್ರಿಜೇಶ್ ಚೌಟ, ಬಿಜೆಪಿ ಕಾರ್ಯಕರ್ತರ ಜೊತೆಗೆ ದೇವರಲ್ಲಿ ಪ್ರಾರ್ಥಿಸಿ ಮತಯಾಚನೆಗೆ ತೊಡಗಿದ್ದಾರೆ. ಬಳಿಕ ಹಳೆಯಂಗಡಿ ಮತ್ತು ಕಿನ್ನಿಗೋಳಿ ಪೇಟೆಯಲ್ಲಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಬಿಜೆಪಿ ಪ್ರಮುಖರ ಜೊತೆಗೆ ಸಂಚರಿಸಿದ ಚೌಟರಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಮತದಾರರು ಕೈಕುಲುಕಿ ಬಿಜೆಪಿ ಮತ್ತು ಮೋದಿಗೆ ಜೈಕಾರ ಕೂಗಿದ್ದಾರೆ. ಇದರ ನಡುವೆ ಬಳ್ಕುಂಜೆ ವಿಠೋಧರ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿಯಿತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದ್ದಾರೆ.
ಸಂಜೆಯ ವೇಳೆಗೆ ಮೂಡುಬಿದ್ರೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ್ದು, ಪ್ರತಿ ಮತದಾರರಿಗೂ ಕೈಕುಲುಕಿ ಮೋದಿಗೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ. ದೇಶಕ್ಕಾಗಿ ಮತ ನೀಡಿ, ನಿಮ್ಮ ಪ್ರತಿ ಮತವೂ ದೇಶದ ಭವಿಷ್ಯ ನಿರ್ಣಯಿಸುತ್ತದೆ ಎಂದು ಹೇಳಿದ್ದಾರೆ. ಕಬ್ಬಿನ ಜ್ಯೂಸ್ ಶಾಪ್ ನಿಂದ ಹಿಡಿದು ಪ್ರತಿ ಅಂಗಡಿ, ಮಳಿಗೆಗೂ ತೆರಳಿ ಸ್ವತಃ ಬ್ರಿಜೇಶ್ ಚೌಟ ಮತಯಾಚನೆ ಮಾಡಿದ್ದಾರೆ. ಎಲ್ಲ ಕಡೆಯೂ ವ್ಯಾಪಾರಸ್ಥರು ಚೌಟರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಯುವಕರು ಸಾಥ್ ಕೊಟ್ಟಿದ್ದು, ಜೈಕಾರದ ಘೋಷಣೆ ಕೂಗಿದ್ದಾರೆ. ಕಿನ್ನಿಗೋಳಿಯಲ್ಲಿ ಸ್ಥಳೀಯ ಮುಖಂಡ ಈಶ್ವರ್ ಕಟೀಲ್ ನೇತೃತ್ವದಲ್ಲಿ ಮಹಿಳೆಯರು, ಸ್ಥಳೀಯ ಕಾರ್ಯಕರ್ತರು ಮೋದಿಗೆ ಜೈಕಾರ ಕೂಗಿದ್ದಾರೆ.
ಸಂಜೆಯ ಬಳಿಕ ಬೆಳುವಾಯಿ ನಡ್ಡೋಡಿ ಬ್ರಹ್ಮಕಲಶ ನಡೆಯುತ್ತಿದ್ದಲ್ಲಿಗೆ ತೆರಳಿ ಜನರಲ್ಲಿ ಮತಯಾಚನೆ ಮಾಡಿದ್ದಾರೆ. ಆನಂತರ, ಶಿರ್ತಾಡಿಯ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ, ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಕೇಳಿದ್ದಾರೆ. ದೇವಸ್ಥಾನ ಭೇಟಿಗೈದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಸಾಥ್ ಕೊಟ್ಟಿದ್ದಾರೆ. ಎಲ್ಲ ಕಡೆಯೂ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಜೊತೆಗಿದ್ದು ಬಿರುಸಿನ ಮತಪ್ರಚಾರ ಕೈಗೊಂಡಿದ್ದಾರೆ.