6 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿದ ದ್ವಾರಕೀಶ್ ಇಂದು ಕಣ್ಮರೆಯಾಗಿದ್ದಾರೆ. ಅಭಿಮಾನಿಗಳನ್ನು ನಕ್ಕು-ನಲಿಸಿದ ಪ್ರಚಂಡ ಕುಳ್ಳ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಇಡೀ ಸ್ಯಾಂಡಲ್ವುಡ್ ಶೋಕ ಸಾಗರದಲ್ಲಿ ಮುಳುಗಿದೆ. ಹಿರಿಯ ನಟನ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಹಾಕಿದ್ದಾರೆ. ಸ್ಟಾರ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್ ಮಾಡಲು ಫಿಲ್ಮ್ ಚೇಂಬರ್ ನಿರ್ಧರಿಸಿದೆ. ಇಂದು ನಮ್ಮನ್ನು ಅಗಲಿದ ಹಿರಿಯ ನಟ ದ್ವಾರಕೀಶ್ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್ ಮಾಡಲು ನಿರ್ಧಾರ ಮಾಡಿರುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಹೇಳಿದ್ದಾರೆ. ಎಲ್ಲರು ಸಹಕಾರ ನೀಡುವಂತೆ ಮನವಿ ಸಹ ಮಾಡಿಕೊಂಡಿದ್ದಾರೆ. ನಾಳೆ ಒಂದು ದಿನ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸಿ, ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸೋಣ, ಅವರನ್ನು ಗೌರವಯುತವಾಗಿ ಕಳಿಸಿಕೊಡೋಣ ಎಂದರು. ಅಲ್ಲದೇ ದ್ವಾರಕೀಶ್ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೂ ಮಾತಾಡುವೆ ಎಂದು ಎನ್ ಎಂ ಸುರೇಶ್ ಹೇಳಿದರು. ಇಂದು ಮುಂಜಾನೆ ದ್ವಾರಕೀಶ್ ಅವರಿಗೆ ಹೃದಯಾಘಾತ ಆಗಿದೆ. ಕಾಫಿ ಕುಡಿದು ಮಲಗಿದ ನಟ ಮತ್ತೆ ಏಳಲೇ ಇಲ್ಲ. ದ್ವಾರಕೀಶ್ ನಿಧನದ ಬಗ್ಗೆ ಮಗ ಗಿರಿ ದ್ವಾರಕೀಶ್ ಮಾಹಿತಿ ನೀಡಿದ್ರು. ದ್ವಾರಕೀಶ್ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ದ್ವಾರಕೀಶ್ ಅವರ ನಿವಾಸದಲ್ಲಿ ಇಂದು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತ್ರ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ತಿಳಿಸಿದರು.


