ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಂಟ – ಬಿಲ್ಲವ ಸಮುದಾಯದ ಹೆಸರಿನಲ್ಲಿ ಮತದಾರರನ್ನು ಎತ್ತಿಕಟ್ಟಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಫೇಕ್ ಐಡಿಗಳನ್ನು ಸೃಷ್ಟಿಸಿ ಬಿಲ್ಲವರನ್ನು ತುಚ್ಚವಾಗಿ ಬಿಂಬಿಸುವ ರೀತಿ, ಬಂಟರ ವಿರುದ್ಧ ಎತ್ತಿಕಟ್ಟುವ ರೀತಿ ಪೋಸ್ಟ್ ಗಳ ವಿರುದ್ಧ ಬಿಜೆಪಿ ಯುವಮೋರ್ಚಾ ಸೈಬರ್ ಠಾಣೆಗೆ ದೂರು ನೀಡಿದೆ.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಂತಹ ನಕಲಿ ಖಾತೆಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೈಬರ್ ಕ್ರೈಮ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ. ಬಿಲ್ಲವರನ್ನು, ಒಂದು ಕಾಲದಲ್ಲಿ ಜೀತ ಮಾಡುತ್ತಿದ್ದವರು ಈಗ ಅಧಿಕಾರ ಕೇಳುವ ಹಂತಕ್ಕೆ ಬಂದಿದ್ದಾರೆ.
ದೇವಸ್ಥಾನ ಪ್ರವೇಶವೇ ಇಲ್ಲದ ಸಮುದಾಯ. ಇವರು ದೇವಸ್ಥಾನ ನೋಡಿದ್ದು ಯಾವಾಗ ಎಂದು ಜಯಕರ್ ಶೆಟ್ಟಿ ಶೆಟ್ಟಿ ಎಂಬ ಹೆಸರಿನ ಐಡಿಯಲ್ಲಿ ಪ್ರಶ್ನಿಸಲಾಗಿದೆ. ಇನ್ನೊಂದು ಶ್ವೇತಾ ಶೆಟ್ಟಿ ಶೆಟ್ಟಿ ಹೆಸರಿನ ಐಡಿಯಲ್ಲಿ ಬಿಲ್ಲವರನ್ನು ಅಣಕಿಸಿ ಕಮೆಂಟ್ ಮಾಡಲಾಗಿದೆ. ಕಾರ್ತಿಕ್ ಗಣೇಶ್ ಶೆಟ್ಟಿ ಹೆಸರಿನ ಮತ್ತೊಂದು ಐಡಿಯಲ್ಲಿ ಬಿಲ್ಲವರನ್ನು ಅಣಕಿಸಲಾಗಿದೆ. ಅಲ್ಲದೆ ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಹೀಯಾಳಿಸಿ ಕಮೆಂಟ್ ಹಾಕಲಾಗಿದೆ. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಂಟ- ಬಿಲ್ಲವ ಜಾತಿ ನಡುವೆ ಬಿರುಕು ಮೂಡಿಸುವ ಕಾರ್ಯ ಆಗುತ್ತಿದೆ ಎನ್ನಲಾಗಿದೆ