ಕಳೆದ ಕೆಲವು ತಿಂಗಳುಗಳಿಂದ ಸಾಕು ನಾಯಿಗಳ ದಾಳಿ ಹೆಚ್ಚಾಗಿದೆ. ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಕೂಡ ಹೆಚ್ಚಿದೆ. ಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.
ಇದೀಗ ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ಕಂಗಾಲ್, ರಷ್ಯನ್ ಶೆಫರ್ಡ್ ಸೇರಿದಂತೆ 20ಕ್ಕೂ ಹೆಚ್ಚು ಶ್ವಾನ ತಳಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಪಶು ಸಂಗೋಪನೆ ಇಲಾಖೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಹೌದು ಕೇಂದ್ರದ ಆದೇಶವನ್ನು ಪ್ರಶ್ನಿಸಿ, ಬೆಂಗಳೂರಿನ ಕಿಂಗ್ ಸೋಲ್ಮನ್ ಡೇವಿಡ್ ಹಾಗೂ ಮರ್ಡೋನಾ ಜಾನ್ ಎಂಬುವರು ಸಲ್ಲಿಸಿದ್ದ ಆಕ್ಷೇಪಾರ್ಹ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರುಳ್ಳ ಪೀಠ, ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಏ. 6ರಂದು ಇದೇ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿತ್ತು. ಏ. 10ರಂದು ಈ ಪ್ರಕರಣದ ತೀರ್ಪು ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರ ಮಾ. 12ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.
ಕೇಂದ್ರದ ಆದೇಶದಲ್ಲಿ ಏನಿತ್ತು?
ಕಳೆದ ಮಾರ್ಚ್ 14 ರಂದು ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯು ಇಂತಹ ತಳಿಯ ನಾಯಿಗಳ ಆಮದನ್ನು ನಿಷೇಧಿಸುವಂತೆ ಶಿಫಾರಸು ಮಾಡಿತ್ತು.ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಮನವಿ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯ ನಂತರ ಕೇಂದ್ರವು ಈ ಕ್ರಮ ಕೈಗೊಂಡಿತ್ತು.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಒ.ಪಿ.ಚೌಧರಿ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದು, ಅಪಾಯಕಾರಿ ತಳಿಗಳೆಂದು ಗುರುತಿಸಲಾದ ನಾಯಿಗಳ ಸಾಕಣೆ ಮತ್ತು ಮಾರಾಟವನ್ನು ನಿಷೇಧಿಸಬೇಕು ಎಂದು ಸ್ಥಳೀಯ ಸಂಸ್ಥೆಗಳು, ಪಶುಸಂಗೋಪನೆ ಇಲಾಖೆಗೆ ಒತ್ತಾಯಿಸಿದ್ದಾರೆ. ಯಾವುದೇ ಹೆಚ್ಚಿನ ಪರವಾನಗಿಯನ್ನು ನೀಡಬಾರದು ಅಥವಾ ಅನುಮತಿಸಬಾರದು ಎಂದು ತಿಳಿಸಿದ್ದರು.