ಬೆಂಗಳೂರು : ಹಿಂದೂ ಹೊಸವರ್ಷದ ನಿಮಿತ್ತ ಸುರಾಜ್ಯ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆ’ಗಳ ನೇತೃತ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ 350 ಕ್ಕೂ ಅಧಿಕ ಕಡೆಗಳಲ್ಲಿ ಸಾಮೂಹಿಕವಾಗಿ ಬ್ರಹ್ಮಧ್ವಜ ಏರಿಸಿ ಪೂಜಿಸಲಾಯಿತು. ವಿಶೇಷವಾಗಿ ಹಲವೆಡೆಗಳಲ್ಲಿ ಸಾಮೂಹಿಕ ದೇವಸ್ಥಾನ ಸ್ವಚ್ಛತೆಯೂ ನೆರವೇರಿತು. ಬ್ರಹ್ಮಧ್ವಜದ ಪೂಜೆಯ ನಂತರ ಎಲ್ಲರೂ ಒಟ್ಟಾಗಿ ‘ಸುರಾಜ್ಯ ಸ್ಥಾಪನೆ’ಯ ಸಾಮೂಹಿಕ ಪ್ರತಿಜ್ಞಾವಿಧಿ ತೆಗೆದುಕೊಂಡರು ಎಂದು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಮನ್ವಯಕರಾದ ಶ್ರೀ. ಕೆ. ಶಿವರಾಮ ತಿಳಿಸಿದ್ದಾರೆ.
ಸಾಮೂಹಿಕ ಬ್ರಹ್ಮಧ್ವಜ ಕರ್ನಾಟಕದ ಗದಗ, ಕಾರವಾರ, ರಾಯಚೂರು, ರಾಯಭಾಗ, ಗುಲ್ಬರ್ಗ, ವಿಜಯಪುರ, ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನ, ಧಾರವಾಡ ಬನಶಂಕರಿ ದೇವಸ್ಥಾನ, ಮಂಗಳೂರು ಪಡುಬಿದ್ರಿಯ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ 60 ಕ್ಕೂ ಹೆಚ್ಚು ಕಡೆಗಳಲ್ಲಿ, ಮಹಾರಾಷ್ಟ್ರದಲ್ಲಿ ಜ್ಯೋತಿರ್ಲಿಂಗ ಶ್ರೀ ಭೀಮಾಶಂಕರ ದೇವಸ್ಥಾನ, ಪುಣೆಯ ವಿಘ್ನಹರ ಗಣಪತಿ ದೇವಸ್ಥಾನ ಸೇರಿದಂತೆ 239 ಕ್ಕೂ ಅಧಿಕ ಕಡೆಗಳಲ್ಲಿ, ಗೋವಾದಲ್ಲಿ 35 ಹಾಗೂ ಉತ್ತರ ಪ್ರದೇಶದಲ್ಲಿ 4 ಕಡೆಗಳಲ್ಲಿ ಏರಿಸಲಾಗಿದೆ. ಶ್ರೀ ಘೃಣೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ರಾಮರಾಜ್ಯದ ಸ್ಥಾಪನೆಯ ಸಂಕಲ್ಪದೊಂದಿಗೆ ಅಭಿಷೇಕವೂ ನೆರವೇರಿತು.
ಈ ವೇಳೆ ಮಾತನಾಡಿದ ಶ್ರೀ. ಶಿವರಾಮ ಇವರು ಹಿಂದೂ ಧರ್ಮದಲ್ಲಿ ಮೂರುವರೆ ಮಹೂರ್ತದಲ್ಲಿ ಶುಭ ಕರ್ಮಗಳನ್ನು ಮಾಡುವ ಸಂಕಲ್ಪ ಮಾಡಲಾಗುತ್ತದೆ. ಯುಗಾದಿಯು ಈ ಮೂರುವರೆ ಮಹೂರ್ತದಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾದ ನಂತರ ದೇಶಕ್ಕೆ ಆಧ್ಯಾತ್ಮಿಕ ಊರ್ಜೆ ಲಭಿಸಿದಂತಾಗಿದೆ. ಈಗ ದೇಶವು ರಾಮರಾಜ್ಯವಾಗಬೇಕಿದೆ ಅರ್ಥಾತ್ ‘ಸ್ವರಾಜ್ಯದಿಂದ ಸುರಾಜ್ಯ’ವಾಗಬೇಕಿದೆ ! ಪ್ರಭು ಶ್ರೀರಾಮನು ಎಲ್ಲ ಜನರ ಕಲ್ಯಾಣವಾಗುವ ರಾಮರಾಜ್ಯದ ಸ್ಥಾಪನೆ ಮಾಡಿದ್ದರು. ಅದರಂತೆ ಆದರ್ಶ ರಾಜ್ಯದ ಸ್ಥಾಪನೆಗಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ನಿರಂತರ ಪ್ರಯತ್ನ ಮಾಡಬೇಕಾಗಿದೆ. ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿ, ನೈತಿಕ ಹಾಗೂ ಸದಾಚಾರಿ ಜೀವನ ನಡೆಸುವ ಸಂಕಲ್ಪ ಮಾಡಬೇಕಿದೆ. ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯನ್ನು ವಿರೋಧಿಸಲು ಕೃತಿಶೀಲರಾಗಬೇಕಿದೆ. ಸಾತ್ತ್ವಿಕ ಸಮಾಜದ ನೇತೃತ್ವದಲ್ಲೇ ಅಧ್ಯಾತ್ಮದ ಆಧಾರಿತ ರಾಷ್ಟ್ರರಚನೆ, ಅರ್ಥಾತ್ ರಾಮರಾಜ್ಯ ಸಂಭವವಾಗಲಿದೆ; ಆದ್ದರಿಂದ ಈ ಯುಗಾದಿಯಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ಸಂಕಲ್ಪ ಮಾಡೋಣ ಎಂದರು.