ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಇಂದು ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಮತ್ತು ಪ್ರಮುಖ ಕಾರ್ಯಕರ್ತರನ್ನು ಭೇಟಿಯಾಗಿ ಮತಯಾಚನೆಗೆ ಸಹಕಾರ ಕೋರಿದರು.
ಬೆಳಗ್ಗೆ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಬೃಜೇಶ್ ಚೌಟ ಅವರನ್ನು ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬರಮಾಡಿಕೊಂಡರು. ಬಳಿಕ ಕಲ್ಲಡ್ಕಲ್ಲಿರುವ ಹಿರಿಯ ಬಿಜೆಪಿ ಮುಖಂಡ ರುಕ್ಮಯ ಪೂಜಾರಿಯವರ ಮನೆಗೆ ಭೇಟಿ ನೀಡಿ, ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು.
ಆನಂತರ, ಹಿರಿಯರಾದ ಕರಿಂಗಾನ ಶ್ರೀನಿವಾಸ ಕಾಮತ್ ಅವರ ಮನೆಗೆ, ಅಮ್ಟೂರು ಕಟ್ಟೆಮಾರು ಮಂತ್ರದೇವತೆ ಸಾನಿಧ್ಯ ಭೇಟಿ ನೀಡಿದರು. ರಘು ಸಪಲ್ಯರವರ ಮನೆಗೆ ಭೇಟಿಗೈದು ಅಲ್ಲಿನ ಸ್ಥಳೀಯರ ಜೊತೆಗೆ ಬೆರೆತು ಮತಯಾಚನೆ ಮಾಡಿದರು.
ಬಂಟ್ವಾಳ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಮುಖರ ಆಶೀರ್ವಾದ ಪಡೆದರು. ಹಿರಿಯರಾದ ಸಂಜೀವ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಸಹಕಾರ ಕೋರಿದರು. ಇದೇ ವೇಳೆ, ಬಂಟ್ವಾಳ ಪೇಟೆಯ ಅಂಚನ್ ಗಾರ್ಮೆಂಟ್ಸ್ ಮಳಿಗೆಗೆ ಭೇಟಿಯಿತ್ತು ಪ್ರಕಾಶ್ ಅಂಚನ್ ಅವರನ್ನು ಮತ್ತು ಅಲ್ಲಿನ ಸಿಬಂದಿ ಹಾಗೂ ಗ್ರಾಹಕರ ಜೊತೆಗೆ ಮತಯಾಚನೆ ಮಾಡಿದರು.
ನೈನಾಡು ಹರೀಂದ್ರ ಪೈಯವರ ಗೇರುಬೀಜ ಫ್ಯಾಕ್ಟರಿ, ವಾಮದಪದವು ಶ್ರೀನಿವಾಸ ಇಂಡಸ್ಟ್ರೀಸ್ ಭೇಟಿ ನೀಡಿ ಅಲ್ಲಿದ್ದ ನೂರಾರು ಕಾರ್ಮಿಕರ ಬಳಿ ಹೋಗಿ ಮತ ನೀಡುವಂತೆ ಕೇಳಿಕೊಂಡರು. ಸಂಜೆ ವೇಳೆ ಬಿಜೆಪಿ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ ಇವರ ಮನೆಗೂ ಭೇಟಿ ನೀಡಿ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.