ಬಂಟ್ವಾಳ : ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಜಕ್ರಿ ಬೆಟ್ಟಿನಲ್ಲಿ ನಡೆದಿದೆ. ಬಂಟ್ವಾಳ ಜಕ್ರಿ ಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್ (15) ಮೃತ ಬಾಲಕ.
ಆತ ಮನೆಯಲ್ಲಿ ದೊಡ್ಡಮ್ಮನ ಜತೆ ಮಲಗಿದ್ದು, ಮುಂಜಾನೆ ಮೊಬೈಲ್ ಹಿಡಿದುಕೊಂಡು ಹೊರಗೆ ಬಂದಿದ್ದಾನೆ. ಮನೆಮಂದಿ ಬೆಳಗ್ಗೆ ಎದ್ದು ನೋಡುವಾಗ ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಬಾಲಕನ ತಂದೆ ದಿನೇಶ್ ಹೋಟೆಲ್ ನಡೆಸುತ್ತಿದ್ದು, ಅವರ ಪತ್ನಿ ಬೆಳಗ್ಗೆ ಹೋಟೆಲ್ ನಲ್ಲಿ ಕೆಲಸವಿದೆ ಎಂದು ಅಲ್ಲೇ ಮಲಗಿದ್ದರು. ಬಾಲ್ಯದಿಂದಲೂ ಒಬ್ಬನೇ ಮಲಗುವ ಅಭ್ಯಾಸವಿದ್ದ ಆದಿಶ್, ರಾತ್ರಿ ವೇಳೆ ಎದ್ದರೂ ತಂದೆ, ತಾಯಿ ಗಮನಕ್ಕೆ ಬರುತ್ತಿರಲಿಲ್ಲ. ದಿನೇಶ್ ದಂಪತಿಗೆ ಇಬ್ಬರು ಮಕ್ಕಳು. ದೊಡ್ಡವಳು ಹುಡುಗಿ, ಸಣ್ಣವನು ಆದಿಶ್. ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿಶ್ ಗೆ ಪರೀಕ್ಷೆಗಳು ಮುಗಿದಿದ್ದವು. ಆದರೆ ಮೊಬೈಲ್ ಅನ್ನು ಹಿಡಿದುಕೊಂಡೇ ಯಾವಾಗಲು ಇರುತ್ತಿದ್ದ. ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದನೇ ಅಥವಾ ಏನನ್ನು ನೋಡುತ್ತಿದ್ದ ಎಂಬುದು ಗೊತ್ತಿಲ್ಲ ಎಂದು ಹೆತ್ತವರು ತಿಳಿಸಿದ್ದಾರೆ.