ಬಂಟ್ವಾಳ : ಚುನಾವಣಾ ಕರ್ತವ್ಯದಲ್ಲಿದ್ದ ಅಮ್ಟಾಡಿ ಗ್ರಾಪಂ ಕಾರ್ಯದರ್ಶಿಯೊಬ್ಬರು ಕರ್ತವ್ಯಕ್ಕೆ ಹಾಜರಾಗದೆ ಮನೆಗೂ ತೆರಳದೆ ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಮ್ಮಾಡಿ ಗ್ರಾಮ ಕೊಲ್ಪೆದಬೈಲು ನಿವಾಸಿ, ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ(52) ನಾಪತ್ತೆಯಾದವರು. ಸುಮಾರು 6 ವರ್ಷಗಳಿಂದ ಅಮ್ಟಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದರು. ಮಾ.27 ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಆದರೆ, ಕರ್ತವ್ಯಕ್ಕೂ ಹಾಜರಾಗದೆ ಮನೆಗೂ ಮರಳದೆ ನಾಪತ್ತೆಯಾಗಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿದೆ ಎಂದು ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಎಸ್.ಎಸ್.ಟಿ. ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ನಿನ್ನೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಇತರ ಸಿಬ್ಬಂದಿ ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಇದೇ ರೀತಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಪೋಲೀಸರು ಪತ್ತೆ ಹಚ್ಚಿದ್ದರು. ಇದೀಗ ಇವರ ಬೈಕ್ ಮತ್ತು ಮೊಬೈಲ್ ಫೋನ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಲಕ್ಷ್ಮೀನಾರಾಯಣ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.