Home ಕರಾವಳಿ ಮಂಗಳೂರು: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

ಮಂಗಳೂರು: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

0

ಮಂಗಳೂರು: ರಾಜ್ಯದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿರುವ ಬೆನ್ನಲ್ಲೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೂ ರಾಜ್ಯ ಸರಕಾರ ಮುಂದಾಗಿದೆ.

ನಕ್ಸಲರ ಶರಣಾಗತಿ, ಪುನರ್ವಸತಿಗೆ ಸಂಬಂಧಿಸಿದ ಈ ಹಿಂದಿನ ಯೋಜನೆಗಳಿಗೆ ಹೊಸ ರೂಪ ನೀಡಲಾಗಿದ್ದು ಶರಣಾಗುವ ಓರ್ವ ನಕ್ಸಲನಿಗೆ 7.50 ಲ.ರೂ.ವರೆಗೆ ನಗದು ಪರಿಹಾರ/ಪ್ರೋತ್ಸಾಹಧನ ನೀಡಲಾಗುವುದು. ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಎನಿಸುವಂತಹ ಪ್ಯಾಕೇಜ್‌ ನೀಡಲೂ ನಿರ್ಧರಿಸಲಾಗಿದೆ. ಶರಣಾಗತರಾಗುವವರಿಗೆ ನಗದು ಜತೆಗೆ ಕೌಶಲ ತರಬೇತಿ, ಇತರ ಪ್ರೋತ್ಸಾಹ ಧನ, ಪ್ರಕರಣ ವಾಪಸು ಹಾಗೂ ಪುನರ್ವಸತಿ ಮತ್ತಿತರ ಯೋಜನೆಗಳನ್ನು ಹೊಂದಲಾಗಿದೆ.

ಉನ್ನತೀಕರಣ, 3 ಶ್ರೇಣಿಗಳಲ್ಲಿ ಪರಿಹಾರ 2015ರಲ್ಲಿದ್ದ ನಕ್ಸಲ್‌ ಶರಣಾಗತಿ ಯೋಜನೆಯನ್ನು ಇದೀಗ ಪರಿಷ್ಕರಿಸಿದ್ದು, ನಕ್ಸಲರು/ಎಡಪಂಥೀಯ ಭಯೋತ್ಪಾದಕರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಸರಕಾರದ ಲೆಕ್ಕಾಚಾರ.

ಉನ್ನತೀಕರಿಸಿದ ಯೋಜನೆಯಡಿ ಶರಣಾಗುವ ನಕ್ಸಲರನ್ನು 3 ಶ್ರೇಣಿಗಳಲ್ಲಿ ವಿಭಾಗಿಸಿ “ಪ್ರವರ್ಗ ಎ’ಯವರಿಗೆ 7.5 ಲ.ರೂ., ಪ್ರವರ್ಗ “ಬಿ’ಯವರಿಗೆ 4 ಲ.ರೂ. ಮತ್ತು ಪ್ರವರ್ಗ “ಸಿ’ಯವರಿಗೆ 2 ಲ.ರೂ. ನಿಗದಿಗೊಳಿಸಲಾಗಿದೆ. ನಕ್ಸಲ್‌ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯರಾಗಿದ್ದು ಸೆಂಟ್ರಲ್‌ ಕಮಿಟಿ, ರೀಜನಲ್‌ ಕಮಿಟಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಏರಿಯಾ ಸಮಿತಿಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕಮಿಟಿಗಳ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತವರ ವಿರುದ್ಧ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್‌ ಮೊಕದ್ದಮೆಗಳನ್ನು ಹೊಂದಿರುವ ಸ್ಥಳೀಯ, ಅಂದರೆ ಕರ್ನಾಟಕದಲ್ಲಿ ಜನಿಸಿರುವ/ಕರ್ನಾಟಕದಲ್ಲಿ ನಿವಾಸ ಹೊಂದಿರುವವರನ್ನು ಪ್ರವರ್ಗ “ಎ’ ಎಂದು ಗುರುತಿಸಲಾಗುತ್ತದೆ.

ನಕ್ಸಲ್‌ ಸಂಘಟನೆಗಳ ಸದಸ್ಯರಾಗಿದ್ದು ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯರಾಗಿದ್ದು ವಿವಿಧ ಸಮಿತಿಗಳ ಪೈಕಿ ಯಾವುದಾದರೂ ಒಂದು ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತವರ ವಿರುದ್ಧ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್‌ ಮೊಕದ್ದಮೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ನಿವಾಸ ಹೊಂದದೇ ಇರುವವರನ್ನು ಪ್ರವರ್ಗ “ಬಿ’ಯಲ್ಲಿ ಸೇರಿಸಲಾಗುತ್ತದೆ. ಎಡಪಂಥೀಯ ಭಯೋತ್ಪಾದನಾ ಸಂಘಟನೆಯ ಚಟುವಟಿಕೆಗಳನ್ನು ಬೆಂಬಲಿಸುವವರು, ಕೀಪರ್‌ ಗಳು, ಕೊರಿಯರ್‌ಗಳು, ಮಾಹಿತಿದಾರರು ಮತ್ತು ಈ ಸಂಘಟನೆಗೆ ನೇಮಕ ಮಾಡುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದವರಾಗಿದ್ದು ಪ್ರವರ್ಗ 1 ಮತ್ತು 2ರ ಅಡಿಯಲ್ಲಿ ಯಾವುದೇ ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ತಮ್ಮ ವಿರುದ್ಧ ದೋಷಾರೋಪಣೆ ಪತ್ರ ಹೊಂದಿರುವವರು ಪ್ರವರ್ಗ 3ರಲ್ಲಿ ಇರುತ್ತಾರೆ.

ಆಯುಧ ಶರಣಾಗತಿಗೆ ಹೆಚ್ಚುವರಿ ಮೊತ್ತ ಶರಣಾಗುವವರು ತಮ್ಮ ಶಸ್ತ್ರಾಸ್ತ ಅಥವಾ ಉಪಕರಣಗಳನ್ನು ಒಪ್ಪಿಸಿದರೆ ಪ್ರತೀ ಆಯುಧ ಅಥವಾ ಉಪಕರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉದಾಹರಣೆಗೆ ಎ.ಕೆ.47/56/74 ರೈಫ‌ಲ್‌ಗೆ (ಒಂದು ಆಯುಧಕ್ಕೆ) 30,000 ರೂ., ಯುಎಂಜಿ/ಜಿಪಿಎಂ/ಆರ್‌ಪಿಜಿ/ ಸ್ನೆ„ಪರ್‌ ರೈಫ‌ಲ್‌ಗೆ (ಒಂದು ಆಯುಧಕ್ಕೆ) 50,000 ರೂ., ಪಿಸ್ತೂಲ್‌/ರಿವಾಲ್ವರ್‌ ಒಂದು ಆಯುಧಕ್ಕೆ 10,000 ರೂ., ಎಸ್‌ಎಎಂ ಮಿಸೈಲ್‌ (ಒಂದು ಆಯುಧಕ್ಕೆ) 40,000 ರೂ. ನೀಡಲಾಗುತ್ತದೆ.

ಹೆಚ್ಚುವರಿ ಪ್ರೋತ್ಸಾಹ ಧನ ಶರಣಾಗತರಾಗುವ ನಕ್ಸಲರು ಮಾಹಿತಿ ನೀಡಿದರೆ ಹೆಚ್ಚುವರಿ ಪ್ರೋತ್ಸಾಹಧನ ಸಿಗಲಿದೆ. ತಮ್ಮ ದಳದ ಇತರ ಭೂಗದ ಸದಸ್ಯರನ್ನು ವಶಕ್ಕೆ ಪಡೆಯಲು ಅಥವಾ ಶರಣಾಗತಿಗೆ ಕಾರಣವಾಗುವ ಮಾಹಿತಿಗೆ, ಶಸ್ತ್ರಾಸ್ತ್ರಗಳನ್ನು ಬಚ್ಚಿಡುವ ಡಂಪ್‌ ಗಳನ್ನು ಪತ್ತೆ ಮಾಡಲು ದಾರಿ ತೋರಿಸುವ ಮಾಹಿತಿಗೆ ಹೆಚ್ಚುವರಿ ಪ್ರೋತ್ಸಾಹಧನ ನಿಗದಿ ಆಗಿದೆ. ಅಲ್ಲದೆ ಯಾವುದೇ ವೃತ್ತಿಪರ ಅಥವಾ ಕೌಶಲ ತರಬೇತಿಗಳಿಗೆ ನೋಂದಾಯಿಸಿಕೊಂಡರೆ ಎರಡು ವರ್ಷಗಳವರೆಗೆ ಪ್ರತೀ ತಿಂಗಳು 5,000 ರೂ. ಪ್ರೋತ್ಸಾಹಧನ, ಮಾತ್ರವಲ್ಲದೆ ಔಪಚಾರಿಕ ಶಿಕ್ಷಣಕ್ಕೆ ಮೂರು ವರ್ಷಗಳ ಅವಧಿಗೆ ಪ್ರೋತ್ಸಾಹ ಧನ ಸಿಗಲಿದೆ.

ಪ್ರಕರಣಗಳನ್ನು ಹಿಂಪಡೆಯಲು ಪರಿಗಣನೆ ಶರಣಾಗತರಾದವರು ಮಾಡಿದ ಘೋರ ಅಪರಾಧಗಳು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತದೆ. ಆದಾಗ್ಯೂ ರಾಜ್ಯ ಸರಕಾರ ಸರಿಯಾದ ಕಾರ್ಯವಿಧಾನಗಳ ಪಾಲನೆಯ ಅನಂತರ ಶರಣಾದವರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲು ಪರಿಗಣಿಸಬಹುದು. ಶರಣಾದ ನಕ್ಸಲರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಸರಕಾರವೇ ವಕೀಲರನ್ನೂ ನೇಮಿಸಬಹುದು. ಅಲ್ಲದೆ ಶರಣಾದವರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗಳಿಗಾಗಿ ರಾಜ್ಯ ಸರಕಾರ ತ್ವರಿತಗತಿ ನ್ಯಾಯಾಲಯಗಳನ್ನೂ ತೆರೆಯಬಹುದು ಎಂಬುದನ್ನು ಉನ್ನತೀಕರಿಸಿದ ಶರಣಾಗತಿ ಯೋಜನೆಯಲ್ಲಿ ಉಲ್ಲೇಖೀಸಲಾಗಿದೆ.

14 ಮಂದಿ ಶರಣಾಗತಿ ಈ ಹಿಂದೆ ಮಹಿಳೆಯರೂ ಸೇರಿದಂತೆ ಭೂಗತರಾಗಿದ್ದ 14 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನ ಸಹಿತ ಪುನರ್ವಸತಿ ಮಾಡ ಲಾಗಿದೆ. ಇದೀಗ ಇಂತಹ ಚಟು ವಟಿಕೆಗಳಲ್ಲಿ ತೊಡಗಿರುವ ಇತರರನ್ನು ಕೂಡ ಸೆಳೆದು ಅವರನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಯೋಜನೆ ಉನ್ನತೀಕರಿಸಲಾಗಿದ್ದು ಶರಣಾಗುವವರಿಗೆ ಹೆಚ್ಚು ಸೌಲಭ್ಯಗಳು ಸಿಗಲಿವೆ. ಇದು ಹೊಸ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುವ, ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವವರಿಗೆ ಒಳ್ಳೆಯ ಅವಕಾಶ ಎಂದು ಉನ್ನತ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಸಂತೋಷ್‌ ಬೊಳ್ಳೆಟ್ಟು

LEAVE A REPLY

Please enter your comment!
Please enter your name here