Home ಕರಾವಳಿ ದೇಶದಲ್ಲಿ ಶಾಂತಿ-ಸುವ್ಯವಸ್ಥೆ, ಭದ್ರತೆಗೆ ಮತ್ತೊಂದು ಹೆಸರೇ ಮೋದಿ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ದೇಶದಲ್ಲಿ ಶಾಂತಿ-ಸುವ್ಯವಸ್ಥೆ, ಭದ್ರತೆಗೆ ಮತ್ತೊಂದು ಹೆಸರೇ ಮೋದಿ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

0

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ 2014 ರಿಂದ ಇಲ್ಲಿಯ ವರೆಗೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಭಯಮುಕ್ತ ವಾತಾರವಣವನ್ನು ನಿರ್ಮಾಣ ಮಾಡಿರುವುದು ಮೋದಿ ಸರ್ಕಾರದ ಆಡಳಿತದ ಹೆಗ್ಗಳಿಕೆಯಾಗಿದೆ. ಇಂತಹ ಆಡಳಿತ ಅವರಿಂದ ಮಾತ್ರ ಸಾಧ್ಯ ಎಂದು ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.‌ಬ್ರಿಜೇಶ್ ಚೌಟ ಹೇಳಿದರು.


ಅವರು ಬಂಟ್ವಾಳ ತಾಲೂಕಿನಲ್ಲಿ ಮತ ಯಾಚನೆಗೆ ಪ್ರವಾಸ ಕೈಗೊಂಡ ಸಂದರ್ಭ ಕಾರ್ಯಕರ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ದೇಶ ದ್ರೋಹಿಗಳ ಅಟ್ಟಹಾಸ ಎಲ್ಲೆ ಮೀರಿತ್ತು. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದರು.

2014ರ ನಂತರ ದೇಶದಲ್ಲಿ ಬದಲಾವಣೆಯ ಅಲೆ ಸೈನ್ಯ ವ್ಯವಸ್ಥೆಯನ್ನು ತಲುಪಿತು. ಆಧುನಿಕ ಆಯುಧಗಳು, ಸೈನಿಕರಿಗೆ ದೊರೆತ ಸುರಕ್ಷಾ ಸಾಮಗ್ರಿಗಳು, ಉನ್ನತ ಗುಣಮಟ್ಟದ ಯುದ್ಧ ಸಾಮಗ್ರಿಗಳಿಂದ ನಮ್ಮ ದೇಶದ ಸೈನ್ಯ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಹಾಗೂ ಸಮರ್ಥವಾಗಿದೆ ಎಂದರು.

ಇಂದು ಉಗ್ರರ ದಾಳಿ, ಬಾಂಬ್‌ ಬ್ಲಾಸ್ಟ್‌ ನಂತಹ ದೇಶ ವಿರೋಧಿ ಕೃತ್ಯಗಳು ದೇಶದ ಹೊರಗೂ-ಒಳಗೂ ಸಂಪೂರ್ಣವಾಗಿ ನಿಂತಿವೆ. ಇದಕ್ಕೆಲ್ಲ ಕಾರಣ, ಗಟ್ಟಿಯಾದ ಆಡಳಿತ, ಸುಭದ್ರ ಸರ್ಕಾರವಾಗಿದೆ. ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನರೇಂದ್ರ ಮೋದಿಯವರ ಗಟ್ಟಿ ಆಡಳಿತದಿಂದ ಮಾತ್ರ ಸಾಧ್ಯ ಎಂದರು.

ನಮ್ಮ ದೇಶಕ್ಕೆ ಶತ್ರುಗಳಿಲ್ಲ ಅಂತ ಅಲ್ಲ. ದೇಶದ ಹೊರಗೂ, ಒಳಗೂ ಶತ್ರುಗಳಿದ್ದಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಡಲು ಮೋದಿಯಂತಹ ಸಮರ್ಥ ನಾಯಕತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.

ಪ್ರಸ್ತುತ 2024ರ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುವ ಮೂಲಕ, ಸಮರ್ಥ ನಾಯಕತ್ವದ ಮೋದಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ. ನಮ್ಮ ದೇಶವನ್ನು ಮತ್ತಷ್ಟು ಸಮೃದ್ಧಗೊಳಿಸೋಣ ಎಂದು ಎಲ್ಲರ ಸಹಕಾರವನ್ನು ಕೋರಿದರು.

ನಾನು ಸೈನ್ಯದಲ್ಲಿ ಕೆಲಸ ಮಾಡಿದವನು. ಅಲ್ಲಿನ ಕಠಿಣ ಪರಿಸ್ಥಿತಿಗಳು ನನಗೆ ಗೊತ್ತು. ಒಂದು ಬಾಂಬ್‌ ಬ್ಲಾಸ್ಟ್‌ ಆದ ನಂತರದ ಪರಿಸ್ಥಿತಿಗಳು ನಮಗೆಲ್ಲ ತಿಳಿದಿರುತ್ತವೆ. ಆದರೆ, ಬ್ಲಾಸ್ಟ್‌ ಆಗದೇ ಇರುವಂತೆ ನೋಡಿಕೊಳ್ಳುವುದಕ್ಕೆ ಬೇಕಾದ ಆಡಳಿತ ವ್ಯವಸ್ಥೆ, ಸುರಕ್ಷಾ ವ್ಯವಸ್ಥೆ ಹಾಗೂ ಇಂಟಲಿಜೆನ್ಸ್‌ ವ್ಯವಸ್ಥೆಗಳನ್ನು ಸಮರ್ಥವಾಗಿಟ್ಟುಕೊಂಡು ಮುನ್ನಡೆಸುವುದು ಸಮರ್ಥ ಆಡಳಿತ ನಡೆಸುವವರಿಗೆ ಮಾತ್ರ ಗೊತ್ತು.

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಬಂಟ್ವಾಳ ಮಂಡಲದ ಪ್ರವಾಸವನ್ನು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವರ ದರ್ಶನ ಪಡೆದು ಪ್ರಾರಂಭಿಸಿದರು.

ಬಳಿಕ ಕಾವಳಪಡ್ನೂರು ಮಹಾಶಕ್ತಿಕೇಂದ್ರ, ನಾವೂರು ಮಹಾ ಶಕ್ತಿ ಕೇಂದ್ರ, ನರಿಕೊಂಬು ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

LEAVE A REPLY

Please enter your comment!
Please enter your name here