ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮಹಿಳೆಯೊಬ್ಬರನ್ನು ಜೀವರಕ್ಷಕರೊಬ್ಬರು ರಕ್ಷಿಸಿದರೂ ಸಕಾಲದಲ್ಲಿ ಆಂಬ್ಯುಲೆನ್ಸ್ ಸಿಗದ ಕಾರಣ ಆಮ್ಲಜನಕ ಸಿಗದೆ ಆಕೆ ಕೊನೆಯುಸಿರೆಳೆದ ಘಟನೆ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ.
ಸುಮಾರು 50 ವರ್ಷದ ಮಹಿಳೆ ಸೋಮೇಶ್ವರ ಸಮುದ್ರತೀರದಲ್ಲಿ ರುದ್ರಪಾದೆ ಬಳಿ ಸ್ನಾನ ಮಾಡುತ್ತಿದ್ದಾಗ, ಭಾರಿ ಅಲೆಗೆ ಸಿಲುಕಿ ಸಮುದ್ರಪಾಲಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಕೂಗಿದ ಕಾರಣ ವಿಷಯ ತಿಳಿದು ಜೀವರಕ್ಷಕ ಅಶೋಕ್ ತಕ್ಷಣವೇ 1 ಕಿ.ಮೀ ದೂರದ ಮನೆಯಿಂದ ಓಡಿಕೊಂಡೇ ರುದ್ರಪಾದೆಯತ್ತ ಧಾವಿಸಿ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಸಮುದ್ರ ತೀರಕ್ಕೆ ತಂದಿದ್ದರು. ಅಲ್ಲಿಂದ ಮತ್ತೆ ದೇವಸ್ಥಾನ ಬಳಿ ಒಬ್ಬರೇ ಮೆಟ್ಟಿಲುಗಳನ್ನು ಹತ್ತಿ ಎತ್ತಿಕೊಂಡು ರಸ್ತೆಯವರೆಗೂ ತಂದಿದ್ದರು.
ಘಟನೆ ನಡೆದ ತಕ್ಷಣವೇ ಉಳ್ಳಾಲ ಠಾಣೆಯ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ ಗೆ ಸ್ಥಳೀಯರು ಕರೆ ಮಾಡಿದ್ದರು. ಸ್ಥಳಕ್ಕೆ ಆಂಬ್ಯುಲೆನ್ಸ್ ವಾಹನ ಹಾಗೂ ಪೊಲೀಸರು ತಲುಪುವಾಗ 1 ಗಂಟೆ ವಿಳಂಬವಾಗಿತ್ತು. ಇದರಿಂದಾಗಿ ಮಹಿಳೆಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಮಹಿಳೆ ಸಾವನಪ್ಪಿದ್ದಾರೆ.