ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ವಿ.ಜಿ. ಪಾಲ್ ಎಂದೇ ಖ್ಯಾತರಾಗಿರುವ ರಂಗಕರ್ಮಿ, ಸಂಘಟಕ, ನಿರ್ದೇಶಕ ವೇಣುಗೋಪಾಲ್ ಟಿ. ಕೋಟ್ಯಾನ್ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮಂಗಳೂರಿನ ಬೊಕ್ಕಪಟ್ಣದಲ್ಲಿ 1946ರಲ್ಲಿ ಜನಿಸಿದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದ ಅವರು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಅವರು ಸುಮಾರು 3 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು.ಇವರು ೧೦೧ ಸಿನಿಮಾಗಳಲ್ಲಿ ನಟಿಸಿದ್ದು, ದುಬೈ ಕೊಲ್ಲಿ ರಾಷ್ಟ್ರಗಳಿಗೆ ತುಳು ಸಿನಿಮಾ ಪರಿಚಯಿಸಿದ ಕೀರ್ತಿ ವಿ.ಜಿ. ಪಾಲ್ ಅವರಿಗೆ ಸಲ್ಲುತ್ತದೆ
1961ರಲ್ಲಿ ಕಲ್ಜಿಗದ ಕುರುಕ್ಷೇತ್ರ ತುಳುನಾಟಕದ ಮೂಲಕ ಮೊದಲ ರಂಗಪ್ರವೇಶ ಮಾಡಿದರು. ಸುಮಾರು 2 ಸಾವಿರ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 50 ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದಾರೆ. ಪೂ ಪನ್ನೀರ್ ತುಳು ವೀಡಿಯೋ ಚಿತ್ರ, ಹಲವು ಕಿರುತೆರೆ ಚಿತ್ರಗಳಲ್ಲಿ ಅಭಿನಯಿಸಿದ್ದು ಕೇಂದ್ರ ಸರಕಾರದ ಕರಾವಳಿ ಮತ್ತು ತೆರೆಗಳು ಸಾಕ್ಷ್ಯಚಿತ್ರಗಳಲ್ಲೂ ಪಾತ್ರ ಮಾಡಿದ್ದಾರೆ. ನಾಟಕ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದ.ಕ. ರಾಜ್ಯೋತ್ಸವ ಪ್ರಶಸ್ತಿ, ರಂಗ ಚಾವಡಿ ಪ್ರಶಸ್ತಿ, ಮೊಗವೀರಸಾಧನಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ೧೦ ಗಂಟೆಗೆ ಸ್ವಗೃಹದಲ್ಲಿ ಸಾರ್ವಜನಿಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರ ಪುತ್ರ ಸಚಿನ್ ಪಾಲ್ ತಿಳಿಸಿದ್ದಾರೆ.