ಮಂಗಳೂರು: ದಕ್ಷಿಣ ಕನ್ನಡ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಗೆ ಈಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಳೀನ್ ಕುಮಾರ್ ಕಟೀಲ್ ತೀವ್ರ ಭಾವುಕರಾಗಿ ಮಾತನಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ವರಿಷ್ಠರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಡ್ತಾರೆ.
ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದ್ದಾರೆ.
ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ವರಿಷ್ಠರು ನಮಗೆ ಏನು ಮಾಡಲು ಹೋಳುತ್ತಾರೋ ಅದನ್ನು ಮಾಡುತ್ತೇವೆ. ಗುಡಿಸು ಎಂದರೆ ಗುಡಿಸುತ್ತೇವೆ, ಒರೆಸು ಎಂದರೆ ಒರೆಸುತ್ತೇವೆ ಎನ್ನುತ್ತಾ ಭಾವುಕರಾದರು.
ಪಕ್ಷಕ್ಕೆ ಹೊಸಬರು ಬರುತ್ತಿರಬೇಕು, ಬದಲಾವಣೆ ಆಗುತ್ತಿರಬೇಕು. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿಯು ಬದಲಾಗಬೇಕು ಎಂದು ಬಿಜೆಪಿ ಕಾರ್ಯಕರ್ತರ ವಾಟ್ಸಪ್ ಗುಂಪುಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ,ಸದ್ಯ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳ ಪ್ರಕಾರ ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರಿಗೆ 15 ವರ್ಷಗಳ ಕಾಲ ಅಧಿಕಾರ ನೀಡಿದ್ದು ಈ ಬಾರಿ ಹೊಸ ಅಭ್ಯರ್ಥಿಗೆ ಅವಕಾಶ ನೀಡಬೇಕು ಹಾಗೂ ಹೊಂದಾಣಿಕೆ ರಾಜಕೀಯ ದಕ್ಷಿಣ ಕನ್ನಡದಲ್ಲಿ ನಡೆಯಬಾರದು ಎಂಬುದು ತೀವ್ರ ಚರ್ಚೆಯಾಗುತ್ತಿದೆ.