Home ದೇಶ ಮಹಿಳಾ ದಿನಾಚರಣೆಯಂದು ರಾಜ್ಯಸಭೆಗೆ ನಾಮನಿರ್ದೇಶನ: ಡಬಲ್‌ ಸರ್ಪ್ರೈಸ್‌ ಎಂದ ಸುಧಾ ಮೂರ್ತಿ

ಮಹಿಳಾ ದಿನಾಚರಣೆಯಂದು ರಾಜ್ಯಸಭೆಗೆ ನಾಮನಿರ್ದೇಶನ: ಡಬಲ್‌ ಸರ್ಪ್ರೈಸ್‌ ಎಂದ ಸುಧಾ ಮೂರ್ತಿ

0

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಅಚ್ಚರಿ ಮೂಡಿಸಿದೆ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.

‘ನಾನು ಎಂದಿಗೂ ರಾಜ್ಯಸಭೆ ಸ್ಥಾನವನ್ನು ಬಯಸಿರಲಿಲ್ಲ. ಕೇಂದ್ರ ಸರ್ಕಾರವು ನನ್ನನ್ನು ನಾಮನಿರ್ದೇಶನ ಮಾಡಲು ಏಕೆ ಆಯ್ಕೆ ಮಾಡಿತು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ’ಎಂದು ಅವರು ತಿಳಿಸಿದ್ದಾರೆ.

ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಪ್ರಸ್ತುತ ಥಾಯ್ಲೆಂಡ್ ಪ್ರವಾಸದಲ್ಲಿರುವ ಸುಧಾ ಮೂರ್ತಿ ಅವರು ದೂರವಾಣಿ ಮೂಲಕ ‘ಪಿಟಿಐ’ಗೆ ತಿಳಿಸಿದ್ದಾರೆ.

‘ನನಗಿದು ಹೊಸ ಜವಾಬ್ದಾರಿ. ಅಲ್ಲಿ ನಾನೇನು ಮಾಡಬಲ್ಲೆ ಎಂಬುದನ್ನು ಅವಲಕೋಕಿಸಬೇಕಿದೆ. ಅಲ್ಲಿನ ಕೆಲಸ ಕಾರ್ಯಗಳ ಕುರಿತು ನಾನು ಮೊದಲು ಅಧ್ಯಯನ ನಡೆಸಬೇಕು. ನಂತರವಷ್ಟೇ ನಾನೇನು ಮಾಡಬಲ್ಲೆ ಎಂಬದು ಸ್ಪಷ್ಟವಾಗಲಿದೆ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಸುಧಾಮೂರ್ತಿ ಅವರನ್ನು ಇಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾಮೂರ್ತಿ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಬಲ ಬಂದಂತಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಉದಾಹರಿಸುತ್ತದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here