Home ಕರಾವಳಿ ಉಳ್ಳಾಲ: ಪುರಾಣ ಪ್ರಸಿದ್ಧ ಕೊಂಡಾಣ ದೈವಸ್ಥಾನದ ಭಂಡಾರ ಮನೆ ಧ್ವಂಸ- ಮೂವರು ಬಂಧನ

ಉಳ್ಳಾಲ: ಪುರಾಣ ಪ್ರಸಿದ್ಧ ಕೊಂಡಾಣ ದೈವಸ್ಥಾನದ ಭಂಡಾರ ಮನೆ ಧ್ವಂಸ- ಮೂವರು ಬಂಧನ

0

ಉಳ್ಳಾಲ:  ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣದಲ್ಲಿ ನಡೆದಿದೆ.


ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ , ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಲಾಗಿದೆ.

ದೈವಸ್ಥಾನದ ಆಡಳಿತ ಮಂಡಳಿ ವಿಚಾರವಾಗಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ತಹಶೀಲ್ದಾ‌ರ್ ಪುಟ್ಟರಾಜು, ಎಸಿಪಿ ಧನ್ಯಾ ನಾಯಕ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನಂದ್ ಅವರು ಠಾಣೆಗೆ ದೂರು ನೀಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರ ಜೊತೆಗೆ ಎರಡು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಮೂವರು ಆರೋಪಿಗಳ ಬಂಧನ: ಭಂಡಾರ ಮನೆ ಧ್ವಂಸ ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಇಂದು ಬೆಳಗ್ಗಿನ ಜಾವ ನೂತನ ಭಂಡಾರ ಮನೆ ಧ್ವಂಸಗೊಳಿಸಲಾಗಿತ್ತು. ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.

ಆರೋಪಿಗಳಿಂದ ತಪ್ಪೊಪ್ಪಿಗೆ:ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನಕ್ಕೆ ಒಟ್ಟು 16 ಗುರಿಕಾರರು ಇದ್ದಾರೆ. ಇವರೆಲ್ಲರೂ ನೂತನ ಭಂಡಾರ ಮನೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಧಾರ್ಮಿಕ ದತ್ತಿ ಕಮಿಷನರ್ ಹಾಗೂ ತಹಶೀಲ್ದಾರ್​ಗೆ ದೂರು ನೀಡಲಾಗಿತ್ತು. ಹೀಗಿದ್ದರೂ ಕಾಮಗಾರಿ ನಡೆಯುತ್ತಿದ್ದ ಕಾರಣ ಧ್ವಂಸಗೈದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here