ಉಡುಪಿ : ಜ್ಯುವೆಲ್ಲರಿ ಶಾಪಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರು ನಕಲಿ ಚಿನ್ನಾಭರಣ ಕೊಟ್ಟು ಅಸಲಿ ಚಿನ್ನಾಭರಣ ಪಡೆದುಕೊಂಡು ಹೋಗಿ ಲಕ್ಷಾಂತರ ರೂಪಾಯಿಗಳ ಟೋಪಿ ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ.
ನಗರದ ಕನಕದಾಸ ರಸ್ತೆಯಲ್ಲಿರುವ ನಿತ್ಯಾನಂದ ಎಂಬವರ ಮಾರುತಿ ಜುವೆಲ್ಲರಿಗೆ ಮೂವರು ಬುರ್ಖಧಾರಿ ಮಹಿಳೆಯರು ಗ್ರಾಹಕರಂತೆ ಬಂದಿದ್ದಾರೆ. 15.800 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಖರೀದಿಸಿದ್ದಾರೆ. ಇದಕ್ಕೆ ಬದಲಾಗಿ ಮಹಿಳೆಯರು ತಮ್ಮ ಬಳಿ ಇದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ. ಉಳಿಕೆ ಹಣದ ಪೈಕಿ 19,000ರೂ. ಹಣವನ್ನು ನಗದಾಗಿ ಪಡೆದುಕೊಂಡು ಅಂಗಡಿಯಿಂದ ಕಾಲ್ಕಿತ್ತಿದ್ದಾರೆ. ವ್ಯವಹಾರದ ಸಮಯ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದ ಅವರ ಗಮನವನ್ನು ಬೇರೆಡೆಗೆ ಸೆಳೆದು, ಪರೀಕ್ಷಿಸಲು ನೀಡಿದ್ದ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನದ ಆಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಮಾಲಿಕನಿಗೆ ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.