ಮಂಗಳೂರು: ಬಸ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕ ಮೃತಪಟ್ಟ ಘಟನೆ ಮಂಜೇಶ್ವರ ಚೇವಾರ್ ಸಮೀಪದ ಕುಂಟಗೇರಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಚೇವಾರ್ ಕುಂಟಗೇರಡ್ಕದ ಅಬ್ದುಲ್ ರಹ್ಮಾನ್ (42)ಎಂದು ಗುರುತಿಸಲಾಗಿದೆ ಧರ್ಮತ್ತಡ್ಕ-ಕಾಸರಗೋಡು ರಸ್ತೆಯಲ್ಲಿ ಸಂಚರಿಸುವ ಬಸ್ ಪೆರ್ಮುದೆ ಜಂಕ್ಷನ್ಗೆ ತಲುಪಿದಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ.
ಈ ವೇಳೆ ನೀರು ಕುಡಿದು, ಬಳಿಕ ಬಸ್ಸು ಚಲಾಯಿಸಿಕೊಂಡು ಬಂದಿದ್ದಾರೆ. ಸುಮಾರು ಮೂರು ಕಿ.ಮೀ. ಬಸ್ ಚಲಾಯಿಸಿಕೊಂಡು ಬಂದಿದ್ದು, ಚೇವಾರ್ ಕುಂಟಗೇರಡ್ಕ ನಿಲ್ದಾಣ ತಲುಪಿದಾಗ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಬಸ್ಸು ಕೆಲ ನಿಮಿಷವಾದರೂ ಮುಂದಕ್ಕೆ ಸಾಗದಿದ್ದುದರಿಂದ ಗಮನಿಸಿದಾಗ ಚಾಲಕ ಸ್ಟಿಯರಿಂಗ್ ಮೇಲೆ ತಲೆ ಇಟ್ಟು ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಈ ವೇಳೆ ಚಾಲಕ ಬಸ್ ನಿಲ್ಲಿಸಿದ್ದುದರಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು. ಪ್ರಯಾಣಿಕರು ಹಾಗೂ ನಾಗರಿಕರು ಕೂಡಲೇ ಚಾಲಕನನ್ನು ಬಂದ್ಯೋಡ್ನ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದಾಗ ಬಸ್ಸಿನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಪ್ರಯಾಣಿಕರಿದ್ದರು.