ಮಂಗಳೂರು: ಕಾಂತಾರ ಸಿನಿಮಾದ ಬಳಿಕ ದೈವಾರಾಧನೆ ಇದೀಗ ಸೀರಿಯಲ್ ಗೂ ಇಳಿದಿದೆ. ಇದು ದೈವ ನರ್ತಕರ ಕೆಂಗಣ್ಣಿಗೆ ಗುರಿಯಾಗಿದೆ. ಪರಿಣಾಮ ಖಾಸಗಿ ಚಾನೆಲ್ ನ ಧಾರವಾಹಿಗೆ ಸಂಕಷ್ಟ ಎದುರಾಗಿದೆ.
‘ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿಯಲ್ಲಿ ದೈವ ನರ್ತನದ ಪ್ರದರ್ಶನ ದೃಶ್ಯವಿದೆ. ಈ ದೃಶ್ಯ ಮಹಾ ಸಂಚಿಕೆಯಲ್ಲಿ ಪ್ರದರ್ಶನವಾಗಲಿದೆ ಎಂಬ ಪ್ರೋಮೋವನ್ನು ಸೀರಿಯಲ್ ತಂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದೆ. ಈ ಸೀರಿಯಲ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ತುಳುನಾಡಿನ ದೈವಾರಾಧನೆಯನ್ನು ಸಾಂಸ್ಕೃತಿಕ ಕಲೆಯಂತೆ ಬಿಂಬಿಸಿ ಹಣ ಮಾಡುವುದನ್ನು ಖಂಡಿಸಿ ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆಯು ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದೆ.
ದೈವದ ಪಾತ್ರ ಮಾಡಿರುವ ಕರಾವಳಿಯ ಕಲಾವಿದ ಪ್ರಶಾಂತ್ ಸಿಕೆ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ದಾಖಲಾಗಿದೆ. ಧಾರವಾಹಿ ತಂಡದ ವಿರುದ್ಧವೂ ದೂರು ನೀಡಲಾಗಿದೆ. ಅಲ್ಲದೇ ದೈವಾರಾಧನೆಯ ಚಿತ್ರೀಕರಣವನ್ನು ಪ್ರಸಾರ ಮಾಡದಂತೆ ಮನವಿಯನ್ನು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ. ಒಟ್ಟಿನಲ್ಲಿ ದೈವಾರಾಧನೆಯನ್ನು ಸೀರಿಯಲ್, ಸಿನಿಮಾ, ನಾಟಕಗಳಲ್ಲಿ ಬಳಕೆ ಮಾಡುವುದರ ವಿರುದ್ಧ ಭಾರೀ ವಿರುದ್ಧ ವ್ಯಕ್ತವಾಗುತ್ತಿದೆ.