ಅಕ್ಕಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುವಂತೆ ಮಾಡಿದೆ. ಇದರ ನಡುವೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ರೂ.29ಕ್ಕೆ ಒಂದು ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಇದರ ಸಲುವಾಗಿ ಇಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು. ಹೀಗಾಗಿ ರಾಜ್ಯದ ಜನತೆಗೆ ಸಿಹಿಸುದ್ದಿ ಎನ್ನುವಂತೆ ಭಾರತ್ ಬ್ರಾಂಡ್ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ ಒಂದು ಕೆಜಿಗೆ ರೂ.29ರಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ, ಪ್ರಾಥಮಿಕವಾಗಿ ಮಂಗಳವಾರ ಬೆಂಗಳೂರಿನಲ್ಲಿ ಮಾತ್ರ ಸಿಗಲಿದ್ದು, ನಗರದ ವಿವಿಧೆಡೆ ಭಾರತ್ ಅಕ್ಕಿ ವಾಹನಗಳು ಸಂಚರಿಸಿ ಅಕ್ಕಿ ಮಾರಲಿವೆ. ಬುಧವಾರದಿಂದ ಮಂಡ್ಯದಲ್ಲಿ ಹಾಗೂ ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗೋ ಸಾಧ್ಯತೆ ಇದೆ.
ಬಿಗ್ ಬಾಸ್ಕೆಟ್, ಪ್ಲಿಪ್‌ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್ ಬಝಾರ್‌ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳವಾರ ಸಂಜೆಯಿಂದ ರಿಲೈಯನ್ಸ್ ಸ್ಟೋರ್ಸ್‌ಗಳಲ್ಲಿ ಈ ಅಕ್ಕಿ ಸಿಗಲಿದೆ. ಇನ್ನೊಂದು ವಾರದ ಬಳಿಕ ಇತರೆ ಸ್ಟೋರ್ಸ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು. ಭಾರತ್ ಅಕ್ಕಿ ಜೊತೆಗೆ, ಈಗಾಗಲೇ ವಾಹನಗಳಲ್ಲಿ ಕೇಜಿಗೆ ರೂ.27.50 ನಂತೆ ಮಾರುತ್ತಿರುವ ಗೋಧಿ ಹಿಟ್ಟು, ಕೇಜಿಗೆ ರೂ 60 ನಂತೆ ಕಡ್ಲೆ ಬೇಳೆ ಕೂಡ ಸ್ಟೋರ್ಸ್‌ಗಳಲ್ಲಿ ಪಡೆಯಬಹುದಾಗಿದೆ.