ಮಂಗಳೂರು: ದ.ಕ.ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಹಾಗೂ ತಾತ್ಕಾಲಿಕವಾಗಿ ಪರವಾನಿಗೆ ಅಮಾನುತುಗೊಳಿಸುವ ಆದೇಶವನ್ನು ದಂಡಾಧಿಕಾರಿ ಡಾ. ಆನಂದ್ ಕೆ ಅವರು ಹೊರಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ಯಾರು ಎಂಬಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಬೆನ್ನೆಲ್ಲೇ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
Explosive Act 1984 ಮತ್ತು Explosive Rules 2008ರ ನಿಯಮಾವಳಿ 107 ರಂತೆ ಸುಡುಮದ್ದು ತಯಾರಿಕಾ ಘಟಕಗಳಿಗೆ ನಮೂನೆ ಎಲ್‌ಇ – 1 ರಲ್ಲಿ ಪರವಾನಿಗೆಗಳನ್ನು ಮಂಜೂರು ಮಾಡಿದ್ದು, ಜಿಲ್ಲೆಯಲ್ಲಿ ಪರವಾನಿಗೆ ಪಡೆದುಕೊಂಡ ಅಧಿಕೃತ ತಯಾರಿಕಾ ಘಟಕಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಸರಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳಂತೆ ಪಟಾಕಿ ವ್ಯವಹಾರ ಮಾಡುತ್ತಿರುವುದನ್ನು ನಿಯಂತ್ರಿಸಲು ಮತ್ತು ಪಟಾಕಿಗಳನ್ನು ತಯಾರಿಕೆ ಮಾಡುವ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಗಟ್ಟಲು ಸಲುವಾಗಿ ಮರು ಪರಿಶೀಲನೆ ಮಾಡಲು ಈ ಆದೇಶ ನೀಡಲಾಗಿದೆ.
ಇನ್ನು ಸ್ಫೋಟಕ ನಿಯಮಗಳು 2008 ಅಧಿನಿಯಮ 40 ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧಿಸಿ, ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮಂಗಳೂರು ಮತ್ತು ಪುತ್ತೂರು ಉಪವಿಭಾಗ ಅಧಿಕಾರಿ ಅವರಿಗೆ ಜಿಲ್ಲಾಧಿಕಾರಿ ಡಾ. ಆನಂದ್ ಕೆ ನಿರ್ದೇಶನ ನೀಡಿದ್ದಾರೆ.