ಮಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹೋರಾಡುತ್ತಾ ಹುತಾತ್ಮರಾದ ಯೋಧ, 63ನೇ ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (29)ಗೆ ಮರಣೋತ್ತರ ಶೌರ್ಯ ಚಕ್ರ ಘೋಷಿಸಲಾಗಿದೆ.
ದ.ಕ.ಜಿಲ್ಲೆಯ ಎಂಆರ್ ಪಿಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾದ ವೆಂಕಟೇಶ್ ಅವರ ಏಕೈಕ ಪುತ್ರ ಪ್ರಾಂಜಲ್. ಇವರು ಮೂಲತಃ ಪ್ರಾಂಜಲ್ ಕರಾವಳಿಯವರಾದರೂ ಪ್ರಾಂಜಲ್‌ನ ತಂದೆ, ತಾಯಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಳೆದ ನವೆಂಬರ್ 22ರಂದು ರಜರಿಯಲ್ಲಿ ನಡೆದ ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ನಾಲ್ವರು ಯೋಧರು ಸೇರಿದಂತೆ ಹುತಾತ್ಮರಾಗಿದ್ದರು. ಕ್ಯಾಪ್ಟನ್ ಪ್ರಾಂಜಲ್ ಅವರು ಸುರತ್ಕಲ್ ಮತ್ತು ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು.
ಪೂನಾದ ಸೇನಾ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದರು. ಮಂಗಳೂರು, ಬೆಂಗಳೂರಿನಲ್ಲೂ ಶಿಕ್ಷಣ ಪೂರೈಸಿ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದೆಯಷ್ಟೆ ವಿವಾಹವಾಗಿದ್ದು, ಬಳಿಕ ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಮೇಜರ್ ಆಗಿ ಬಡ್ತಿ ಪಡೆಯುವುದರಲ್ಲಿದ್ದರು.