ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನಲೆ ಜನವರಿ 22 ರಂದು ರಜೆ ಘೋಷಿಸುವಂತೆ ಹಲವಾರು ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಇದೀಗ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕೂಡ ಶಾಲಾ- ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿದ್ದಾರೆ.
ತಾನು ಕೂಡ ರಾಮ ಭಕ್ತ ಎಂದು ಹೇಳುಕೊಳ್ಳುವ ಸಿಎಂ ಸಿದ್ಧರಾಮಯ್ಯ ಅವರು ಮಂದಿರ ಉದ್ಘಾಟನೆಯ ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕು. ಆ ಮಕ್ಕಳು ಅವರವರ ಮನೆಗಳಲ್ಲಿ ಕುಟುಂಬ ಸಮೇತರಾಗಿ ಸಂಭ್ರಮ, ಪೂಜೆ ನೆರವೇರಿಸಲು ಅವಕಾಶ ಮಾಡಿಕೊಡಬೇಕು. ರಾಮನ ಆದರ್ಶ ಬೋಧಿಸುವಂತಹ ಶಿಕ್ಷಣ ಇಲಾಖೆಯು ಜ. 22 ರಂದು ಮಕ್ಕಳು ಕುಟುಂಬ ಸಮೇತ ಪೂಜೆ, ಸಂಭ್ರಮ ಆಚರಿಸಲು ರಾಜ್ಯ ಶಿಕ್ಷಣ ಇಲಾಖೆ ರಜೆ ನೀಡಿಲ್ಲ. ಇದರಿಂದ ರಾಜ್ಯ ಶಿಕ್ಷಣ ಇಲಾಖೆಯು ರಾಮನ ಆದರ್ಶ ಭೋಧಿಸುವ ನೈತಿಕತೆ ಕಳೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದೀಗ ಇಡೀ ದೇಶದಲ್ಲಿ ಹಬ್ಬದ ಸಂಭ್ರಮವಿದ್ದು, ಮನೆ ಮನೆಯಲ್ಲೂ ದೀಪಾವಳಿ ಅಚರಣೆಗೆ ತಯಾರಿ ನಡೆಯುತ್ತಿದೆ. ಶಿಕ್ಷಣ ಇಲಾಖೆ ಮಾತ್ರ ಈ ಸಂಭ್ರಮದಲ್ಲಿ ಮಕ್ಕಳು ಭಾಗವಹಿಸದಂತೆ ರಜೆ ನೀಡದೆ ತಡೆ ಒಡ್ಡಿದೆ. ಕೆಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಈ ದಿನ ಉದ್ದೇಶ ಪೂರ್ವಕವಾಗಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರ ತಕ್ಷಣ ಜ. 22 ರಂದು ರಜೆ ನೀಡಲು ಶಿಕ್ಷಣ ಇಲಾಖೆಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಹುಸಂಖ್ಯಾತರ ಆದರ್ಶ ಪುರುಷ ರಾಮನ ಮಂದಿರವು 500 ವರ್ಷಗಳ ಸುಧೀರ್ಘ ಹೋರಾಟದ ಬಳಿಕ ಮತ್ತೆ ಮರು ಸ್ಥಾಪನೆಯಾಗುತ್ತಿದೆ. ನಮ್ಮ ಪೀಳಿಗೆಗೆ ಈ ದೃಶ್ಯವನ್ನು ನೋಡಲು ದೊರೆತಿರುವುದು ಪುಣ್ಯ. ಈ ಭಾಗ್ಯದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿ ಶಿಕ್ಷಣ ಇಲಾಖೆ ಯಾವ ಸಾಧನೆ ಮಾಡಬೇಕೆಂದು ಹೊರಟಿದೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.