ಮಂಗಳೂರು: ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ 19ರಿಂದ 21ರ ವರೆಗೆ ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸಹ್ಯಾದ್ರಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ.
ಮಂಗಳೂರು ಸಾಹಿತ್ಯ ಹಬ್ಬ ಎನ್ನುವ ಹೆಸರಲ್ಲಿ 2018ರಲ್ಲಿ ಆರಂಭಗೊಂಡ ಲಿಟ್ ಫೆಸ್ಟ್ ಹಿನ್ನೆಲೆ ಮತ್ತು ಉದ್ದೇಶ ಏನು ಅನ್ನೋದರ ಬಗ್ಗೆ ಸಾಮಾನ್ಯ ಜನರಿಗೆ ತಲುಪಿಸುವುದಕ್ಕಾಗಿ ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ತುಳು, ಕನ್ನಡ ಭಾಷೆಯಲ್ಲಿ ಸೇರಿದ್ದ ನೂರಾರು ಮಂದಿಯ ಮನ ಮುಟ್ಟುವಂತೆ ಅಭಿನಯಿಸಿ, ಸಾಹಿತ್ಯ ಹಬ್ಬಕ್ಕೆ ಬರುವಂತೆ ಕರೆಕೊಟ್ಟಿದ್ದಾರೆ.
ರಾಷ್ಟ್ರ ಮಟ್ಟದ ಚಿಂತಕರು, ಬರಹಗಾರರು ಬರಲಿದ್ದು, ಸಾಮಾನ್ಯ ಜನರ ಜೊತೆಗೂ ಸಂವಾದ ನಡೆಸಲಿದ್ದಾರೆ. ಇದಲ್ಲದೆ, ಸಾಹಿತ್ಯ ಅಭಿರುಚಿ ಉಳ್ಳವರನ್ನು ಸೇರಿಸಿ ಹರಟೆ ಹಬ್ಬ ಎನ್ನುವ ಪರಿಕಲ್ಪನೆಯೂ ಇದೆ. 2018ರಲ್ಲಿ ಅದ್ದೂರಿಯಾಗಿ ನಡೆದಿದ್ದ ಲಿಟ್ ಫೆಸ್ಟ್ ಹಬ್ಬವನ್ನು ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ಉದ್ಘಾಟಿಸಿದ್ದರು ಅನ್ನುವುದನ್ನು ಹಿಡಿದು ಪ್ರತಿವರ್ಷ ಲಿಟ್ ಫೆಸ್ಟ್ ಗೆ ಬಂದು ಹೋದ ಸಾಹಿತ್ಯ ದಿಗ್ಗಜರ ಹೆಸರು ಸಹಿತ ಲಿಟ್ ಫೆಸ್ಟ್ ನಲ್ಲಿ ಸಾಮಾನ್ಯ ಜನರೂ ಪಾಲ್ಗೊಳ್ಳಬಹುದು. ಭಾರತ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಈ ಸಾಹಿತ್ಯ ಹಬ್ಬವನ್ನು ಸರಕಾರದ ಸಹಾಯ ಇಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಬೀದಿ ನಾಟಕದ ಮೂಲಕ ತಿಳಿಸಿದ್ದಾರೆ.
ಜನವರಿ 16 ಮತ್ತು 17ರಂದು ಈ ಬೀದಿ ನಾಟಕ ಮಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ನಡೆಯಲಿದೆ. ಒಟ್ಟು ತಂಡವನ್ನು ಕಲಾವಿದೆ ದಿಶಾ ಶೆಟ್ಟಿ ಮುನ್ನಡೆಸುತ್ತಿದ್ದು, ಬೀದಿ ನಾಟಕದ ನಿರ್ದೇಶನವನ್ನು ಗೋವಿಂದದಾಸ ಕಾಲೇಜಿನ ಕಲ್ಚರಲ್ ಡೈರೆಕ್ಟರ್ ವಿನೋದ್ ಶೆಟ್ಟಿ ಕೃಷ್ಣಾಪುರ ಮಾಡಿದ್ದಾರೆ. ಲಿಟ್ ಫೆಸ್ಟ್ ಪೂರ್ವಭಾವಿಯಾಗಿ ಬೀದಿ ನಾಟಕ ಹಮ್ಮಿಕೊಂಡಿದ್ದು, ಸಾಹಿತ್ಯ ಹಬ್ಬಗಳು ಎಲ್ಲ ವರ್ಗದ ಜನಸಾಮಾನ್ಯರನ್ನು ತಲುಪಬೇಕು ಎನ್ನುವ ದೃಷ್ಟಿ ಇಟ್ಟುಕೊಂಡು ರೂಪಿಸಲಾಗಿದೆ.