ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಆಡಳಿತರೂಢ ಕಾಂಗ್ರೆಸ್, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಗುರಿಯನ್ನ ಹಾಕಿಕೊಂಡಿದೆ.
ಹೌದು, ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಹೆಚ್ಚಾಗಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿ ೨೮ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳನ್ನಾದರೂ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದ್ದು, ಪ್ರತಿಯೊಂದು ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನ ಪ್ರತಿಯೊಬ್ಬ ಸಚಿವರಿಗೂ ಕಾಂಗ್ರೆಸ್ ಹೈಕಮಾಂಡ್ ನೀಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಿರಿಯ ನಾಯಕರಿಗಿಂತ ಹೆಚ್ಚಾಗಿ ಈ ಬಾರೀ ಲೋಕ ಅಖಾಡಕ್ಕೆ ಇಳಿಯಲು ಹಲವು ಯುವ ಮುಖಗಳೂ ಸಜ್ಜಾಗುತ್ತಿವೆ. ಈ ಬಾರೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹೆಚ್ಚು ಪ್ರಭಾವಿ ಸಚಿವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಆದರೆ, ಸಚಿವರುಗಳು ತಾವು ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿದ್ದು, ತಮ್ಮ ಮಕ್ಕಳನ್ನ ಚುನಾವಣಾ ಕಣಕ್ಕಿಳಿಸಲು ಪ್ಲಾನ್ ನಡೆಸಿದ್ದಾರೆ.
ದ.ಕ. ಜಿಲ್ಲೆಗೆ ರಕ್ಷಿತ್ ಶಿವರಾಮ್?
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ರಕ್ಷಿತ್ ಶಿವರಾಮ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕುಸುಮಾ ಹನುಮಂತಪ್ಪ ಅವರ ಹೆಸರು ಕೇಳಿ ಬಂದಿದೆ. ವೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮೊಹಮ್ಮದ್ ನಲಪಾಡ್ ಅವರ ಹೆಸರು ಕೇಳಿ ಬಂದಿದೆ. ಅಲ್ಲದೇ ತುಮಕೂರಿಗೆ ನಿಕೇತ್ ರಾಜ್ ಮೌರ್ಯ ಹಾಗೂ ಮುರಳೀಧರ ಹಾಲಪ್ಪ ಆಕಾಂಕ್ಷಿಯಾಗಿದ್ದಾರೆ. ಬೀದರ್ ಗೆ ಸಾಗರ್ ಖಂಡ್ರೆ ಆಕಾಂಕ್ಷಿಯಾಗಿದ್ದರೆ, ಮೈಸೂರು- ಕೊಡಗು ಕ್ಷೇತ್ರಕ್ಕೆ ದೇವರಾಜ್ ಅರಸು ಮೊಮ್ಮಗ ಸೂರಜ್ ಹೆಗ್ಡೆ ಟಿಕೆಟ್ ಆಕಾಂಕ್ಷಿಗಳಾಗಿರುವ ಯುವ ಮುಖಗಳಾಗಿವೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಸದಾನಂದ ಗೌಡ ಅವರು ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೇ ಒಕ್ಕಲಿಗರ ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರ ಸುರಕ್ಷಿತವಾದ ಕ್ಷೇತ್ರವಾಗಿದ್ದು, ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ನಲ್ಲೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವ್ಯನರಸಿಂಹಮೂರ್ತಿ ಅವರು ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಇಬ್ಬರು ಸಚಿವರ ಪುತ್ರ ಹಾಗೂ ಪುತ್ರಿಯ ಹೆಸರುಗಳು ಕೇಳಿಬರುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರು ಬೆಳಗಾವಿಗೆ ಕೇಳಿಬರುತ್ತಿದ್ದರೆ, ಇತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೇ ಲೋಕಸಭಾ ಚುನಾವಣೆ ಹಿನ್ನೆಲೆ ಚಿಕ್ಕೋಡಿಯ ಸಂಯೋಜಕರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ನೇಮಕ ಮಾಡಿದ್ದು, ಟಿಕೆಟ್ ಸಿಗಬಹುದಾದ ಸಾಧ್ಯತೆ ಇದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಾ ರಾಮಯ್ಯ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ ಟಿಕೆಟ್ ಗಾಗಿ ಮಾಜಿ ಮುಖ್ಯಮಂತ್ರಿಯಾಗಿರುವ ವೀರಪ್ಪ ಮೊಯ್ಲಿ ಅವರ ಸಹ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಉಸ್ತುವಾರಿಯಲ್ಲಿ ಸಭೆಯೂ ನಡೆದಿತ್ತು.ಈ ಸಭೆಯಲ್ಲಿ ರಕ್ಷಾ ರಾಮಯ್ಯಗೆ ಟಿಕೆಟ್ ಕೊಡುವಂತೆ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.
ಒಟ್ನಲಿ, ರಾಜ್ಯ ಕಾಂಗ್ರೆಸ್ ನಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಅಳೆದು ತೂಗಿ ಅಭ್ಯರ್ಥಿಗಳ ಹುಡುಕಾಟವನ್ನ ನಡೆಸುತ್ತಿದ್ದಾರೆ. ಯುವ ಮುಖಗಳ ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಆದರೆ, ಅಂತಿಮವಾಗಿ ಗೆಲುವಿನ ಕುದುರೆಗೆ ಹೈಕಮಾಂಡ್ ಟಿಕೆಟ್ ನೀಡುವುದು ಪಕ್ಕಾ. ಹಾಗಾದರೆ ಯಾರೆಲ್ಲಾ ಹೊಸ ಮುಖಗಳಿಗೆ ಈ ಬಾರಿ ಕೈ ಟಿಕೆಟ್ ಸಿಗಬಹುದು ಎಂಬ ಕುತೂಹಲ ಕೆರಳಿಸಿದೆ.