Home ಕರಾವಳಿ ಲಕ್ಷದ್ವೀಪ ಯಾನಕ್ಕೆ ಇದೆ ಮಂಗಳೂರಿನಿಂದಲೂ ಅವಕಾಶ..!

ಲಕ್ಷದ್ವೀಪ ಯಾನಕ್ಕೆ ಇದೆ ಮಂಗಳೂರಿನಿಂದಲೂ ಅವಕಾಶ..!

0

ಮಂಗಳೂರು: ಮಾಲ್ದೀವ್ಸ್‌ ದ್ವೀಪ ಮಂಗಳೂರು ಭಾಗದ ಅನೇಕರ ಹನಿಮೂನ್‌ ಸ್ಪಾಟ್‌ ಎಂದೇ ಪ್ರಸಿದ್ಧ. ಆದರೆ ಬಲು ದುಬಾರಿ. ಹಾಗಾಗಿಯೇ ಅದಕ್ಕೆ ಪರ್ಯಾಯವಾದ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ತೆರಳುವ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.


ಕೆಲವು ವರ್ಷಗಳ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ತೆರಳುತ್ತಿತ್ತು.

ಆದರೆ ಈಗ ಸ್ಥಗಿತಗೊಂಡಿದೆ. ಈ ಹಡಗು ಸೇವೆ ಮತ್ತೆ ಪ್ರಾರಂಭಗೊಳ್ಳಬೇಕಿದೆ. ಅದಕ್ಕಾಗಿ ಜಿಲ್ಲಾಡಳಿತ ಕಾರ್ಯಾರಂಭ ಮಾಡಿದೆ. ಈ ಸಂಬಂಧ ಕೆಲವರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲು ಮುಂದಾಗಿದೆ.

ಸದ್ಯ ಮಾಲ್ದೀವ್ಸ್‌ ಜತೆ ಭಾರತದ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಅದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಲಕ್ಷ ದ್ವೀಪಕ್ಕೆ ಹಾಗೂ ಅಂಡಮಾನ್‌ ದ್ವೀಪಗಳಿಗೆ ಪ್ರವಾಸ ಸಂಪರ್ಕ ಕಲ್ಪಿಸಬೇಕಿದೆ. ಹಾಗೆಯೇ ಪೂರಕ ಮೂಲ ಸೌಕರ್ಯ ಕಲ್ಪಿಸಿದರೆ ಅನುಕೂಲ ಎಂಬುದು ಮಂಗಳೂರಿನ ಟ್ರಾವೆಲ್‌ ಏಜೆನ್ಸಿಯವರ ಅಭಿಪ್ರಾಯ.

ಮಾಲ್ದೀವ್ಸ್‌ಗೆ ಮಂಗಳೂರಿನಿಂದ ಹೆಚ್ಚಾಗಿ ನವದಂಪತಿ ಹೋಗುತ್ತಿದ್ದರು. ಆದರೆ ಅದು ತೀರಾ ದುಬಾರಿ; ಹೊಟೇಲ್‌ ದರವೇ 1 ರಿಂದ 2 ಲಕ್ಷ ರೂ., ಕುಡಿಯುವ ನೀರು ಲೀ.ಗೆ 300 ರೂ. ನೀಡಬೇಕು ಎಂಬುದು ಪ್ರವಾಸ ನಿರ್ವಹಿಸುವವರ ಅಭಿಪ್ರಾಯ.

ಲಕ್ಷದ್ವೀಪವೂ ಮಾಲ್ದೀವ್ಸ್‌ನಷ್ಟೇ ಸುಂದರ ವಾಗಿದೆ. ಈಗ ಪ್ರಧಾನಿಯವರು ಅಲ್ಲಿಗೆ ಭೇಟಿ ನೀಡಿದ ಕಾರಣ ಜನಪ್ರಿಯವಾಗುತ್ತಿದೆ. ಕೆಲವು ಫೋನ್‌ ಕರೆಗಳೂ ಬರತೊಡಗಿದ್ದು, ಮುಂದೆ ಲಕ್ಷದ್ವೀಪಕ್ಕೆ ಪ್ರವಾಸಿಗರು ಹೆಚ್ಚಾಗಬಹುದು ಎನ್ನುತ್ತಾರೆ ಮಂಗಳೂರು ವಿಕ್ರಮ್‌ ಟ್ರಾವೆಲ್ಸ್‌ನ ಎಂಡಿ ಶಿವಾನಂದ್‌.

ಮಂಗಳೂರಿನಿಂದ ಪ್ರಸ್ತುತ ಲಕ್ಷದ್ವೀಪಕ್ಕೆ ಹೋಗಲು ಕ್ರೂಸ್‌ ಹಡಗು ಅಥವಾ ವಿಮಾನವೇ ಆಯ್ಕೆ. ಎರಡಕ್ಕೂ ಪ್ರವಾಸಿಗರು ಕೊಚ್ಚಿಗೆ ತೆರಳಬೇಕು. ಲಕ್ಷದ್ವೀಪಕ್ಕೆ ತೆರಳಲು ಬೋರ್ಡಿಂಗ್‌ ಪಾಸನ್ನೂ ಕೊಚ್ಚಿಯಲ್ಲಿರುವ ಕಚೇರಿಯಲ್ಲೇ ಪಡೆಯಬೇಕಿದೆ.

ಮಂಗಳೂರಿನಲ್ಲಿ ಲಕ್ಷದ್ವೀಪ ಪ್ರವಾಸ ಆರಂಭಿಸಲು ಸಾಕಷ್ಟು ಅವಕಾಶಗಳಿವೆ. ಪ್ರಾರಂಭಿಕ ಹಂತದಲ್ಲಿ ನವಮಂಗಳೂರು ಬಂದರಿಗೆ ಕ್ರೂಸ್‌ ಹಡಗುಗಳು ಬರುವಂತೆ ಮಾಡಬೇಕಿದೆ. ಸದ್ಯ ಮುಂಬಯಿಯಿಂದ ಹೊರಡುವ ಲಕ್ಷದ್ವೀಪದ ಕ್ರೂಸ್‌ ಹಡಗುಗಳು ಗೋವಾಕ್ಕೆ ಬರುತ್ತಿವೆ. ಅವು ಮಂಗಳೂರಿಗೆ ಬರಬೇಕು. ಇಲ್ಲಿ ಪ್ರವಾಸಿಗರಿಗೆ ಕ್ರೂಸ್‌ ಲಾಂಜ್‌ ವ್ಯವಸ್ಥೆ ಇದ್ದು, ಬಳಸಬಹುದಾಗಿದೆ.

 

LEAVE A REPLY

Please enter your comment!
Please enter your name here