ಮಂಗಳೂರು : ಹಣ ದ್ವಿಗುಣವಾಗುತ್ತದೆ ಎಂದು ಆ್ಯಪ್‌ವೊಂದರಲ್ಲಿ ಹೂಡಿಕೆ ಮಾಡಿರುವ 21 ಲಕ್ಷ ರೂ. ಹಣ ಕಳೆದುಕೊಂಡಿರುವ ಮಹಿಳೆಯೊಬ್ಬರು ಬಂಟ್ವಾಳದ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹಣ ದ್ವಿಗುಣ ಮಾಡುವ ಆ್ಯಪ್‌ನಲ್ಲಿ ಅವರು 21 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದರಲ್ಲಿ ಸಂಪೂರ್ಣ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆರ್ಥಿಕ ಸಂಕಷ್ಟದೊಂದಿಗೆ ಮಕ್ಕಳಿಲ್ಲದ ಕೊರಗಿನೊಂದಿಗೆ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ವೀಟಾ ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಆ ಬಳಿಕದಿಂದ ನಾಪತ್ತೆಯಾಗಿದ್ದರು. ವಿಚಾರ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದ್ದರು. ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಮೃತದೇಹ ಪತ್ತೆಯಾಗಿದೆ. ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ವೀಟಾ ಬಳಿಕ ಆ ಹುದ್ದೆಯನ್ನು ತೊರೆದು ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ ಐ ಭಾರತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೇ ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ.