ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಸಾಲ ವಸೂಲಾತಿಗೆ ಗೃಹಲಕ್ಷ್ಮಿ ಹಣ ಕಡಿತಗೊಳಿಸದಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಲಬುರಗಿಯಲ್ಲಿ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ತ್ರೈಮಾಸಿಕ(ಕೆ.ಡಿ.ಪಿ) ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ.
ಕಾರಣ ಬ್ಯಾಂಕ್ ಅಧಿಕಾರಿಗಳು ಅವರ ಸಾಲಕ್ಕೆ ಮರುಪಾವತಿ ಮಾಡಿಕೊಳ್ಳುತ್ತಿದ್ದಾರೆ. ಈ ಕ್ರಮ ಸರಿಯಲ್ಲ, ಇದುವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಸುಗಳ ಅಕ್ರಮ ಸಾಗಾಣಿಕೆ ನಡೆಯುತ್ತಿದೆ. ಗೋರಕ್ಷಕರ ಹೆಸರಿನ ಕೆಲವರು ರೈತರಿಂದ ವಶಪಡಿಸಿಕೊಂಡ 90ಕ್ಕೂ ಅಧಿಕ ಜಾನುವಾರುಗಳನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಗೋಶಾಲೆಗೆ ಕಳಿಸಿದ್ದಾರೆ. ಆ ನಂತರ ಆ ಗೋಶಾಲೆಯವರು ಮತ್ತೊಂದು ಗೋಶಾಲೆಗೆ ಸಾಗಿಸಿರುವುದಾಗಿ ಹೇಳುತ್ತಾರೆ. ಆದರೆ, ಜಾನುವಾರುಗಳು ಈಗ ಯಾವ ಗೋಶಾಲೆಯಲ್ಲಿಯೂ ಇಲ್ಲ. ಅವುಗಳನ್ನು ಅಕ್ರಮ ಸಾಗಾಣಿಕೆ ಮಾಡಲಾಗಿದೆ. ಈ ಕೃತ್ಯದಲ್ಲಿ ಗೃಹಇಲಾಖೆಯ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮತ್ತು ಗೋಶಾಲೆಯವರು ಶಾಮೀಲಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಬುರಗಿಯ ವಿವಿಧ ಭಾಗಗಳಲ್ಲಿ ಬೆಳೆಯುವ ಕೆಂಬಾಳೆ, ತೊಗರಿ, ಸಿರಿಧಾನ್ಯ ಸೇರಿದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆ ಮತ್ತು ಬ್ರಾಂಡಿಂಗ್’ಗಾಗಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಗೆ ಮುಂದಾಗಬೇಕೆಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯಾವ ರಾಜ್ಯದಲ್ಲಿಯೂ ಇರದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ಇಲ್ಲಿ ಹೆಚ್ಚಿವೆ. ಇವೆಲ್ಲದರ ಸದುಪಯೋಗ ಪಡೆಯಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಬ್ರ್ಯಾಂಡಿಂಗ್’ಗೆ ಸರ್ಕಾರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಲ್ಲಾ ರೀತಿಯ ನೆರವು ನೀಡಲಿದೆ. ಈ ಬಗ್ಗೆ ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ರೈತರು ಮಾರುಕಟ್ಟೆ ಇಲ್ಲದೆ ಸಂಕಟಕ್ಕೆ ಒಳಗಾಗಿದ್ದರು. ಮುಂದೆ ಹೀಗಾಗಬಾರದು, ಏನಾದರು ವಿನೂತನ ಪ್ರಯತ್ನ ಮಾಡಿ ಇದರಿಂದ ರೈತರ ಆದಾಯ ದ್ವಿಗುಣವಾಗಬೇಕು. ಇತ್ತೀಚೆಗೆ ತೆಲಂಗಾಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಇಲ್ಲಿನ ತೊಗರಿ ಅಲ್ಲಿ ಮೂರು ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದುದ್ದು ಕಂಡು ಬಂದಿದ್ದು ಸಂಸ್ಕರಣೆ, ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದಲ್ಲಿ ನಮ್ಮ ರೈತರ ಆದಾಯ ವೃದ್ಧಿ ಜೊತೆಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.