ಬೆಳ್ತಂಗಡಿ: ಎಸ್‌ಡಿಎಂಸಿ ಅಧ್ಯಕ್ಷರಿಂದ ಶಾಲಾ ವಿದ್ಯಾರ್ಥಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಬಳ್ಳಮಂಜ ಮಚ್ಚಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಾಲೆಯ ಎಂಟನೇ ತರಗತಿಯ ಮುಹಮ್ಮದ್ ತಫ್ಸಿರ್ ಎಂದು ಗುರುತಿಸಲಾಗಿದೆ. ಎಸ್ ಡಿಎಂಸಿ ಅಧ್ಯಕ್ಷ ಪರಮೇಶ್ ಹಲ್ಲೆ ನಡೆಸಿದ ಆರೋಪಿಯಾಗಿದ್ದು ವಿದ್ಯಾರ್ಥಿ ಮುಹಮ್ಮದ್ ತಫ್ಸಿರ್ ತನ್ನ ಸೈಕಲ್ ಅನ್ನು ಇನ್ನೊಬ್ಬ ವಿದ್ಯಾರ್ಥಿಗೆ ಮಾರಾಟ ಮಾಡಿದ್ದನು. ಇದೇ ವಿಚಾರವಾಗಿ ನ.28ರಂದು ಬಾಲಕನ ತಾಯಿಯನ್ನು ಶಾಲೆಗೆ ಕರೆಸಿದ ಆರೋಪಿ ಪರಮೇಶ್, ತಾಯಿಯ ಎದುರಲ್ಲಿಯೇ ಬಾಲಕನಿಗೆ ಕೋಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಬಾಲಕನ ಎದೆಗೂ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಕೋಲಿನಿಂದ ನಡೆಸಿದ ಹಲ್ಲೆಯಿಂದ ಬಾಲಕನ ಕಾಲಿನಲ್ಲಿ ಗಾಯಗಳಾಗಿದೆ. ಹಲ್ಲೆ ನಡೆಸಿದ ಬಳಿಕ ಇದನ್ನು ಯಾರಿಗೂ ಹೇಳುವುದು ಬೇಡ ಹೇಳಿದರೆ ಸೈಕಲ್ ಕಳವುಗೈದಿರುವುದಾಗಿ ಕೇಸ್ ಮಾಡಿಸುತ್ತೇನೆ ಎಂದು ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ನ.30ರಂದು ಬಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ಆತನ ತಾಯಿ ಈ ಬಗ್ಗೆ ಸಂಬಂಧಿಕರಿಗೆ ಹೇಳಿದ್ದಾರೆ. ಈ ವೇಳೆ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆಯ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದೆ. ಇದೀಗ ದೂರಿನಂತೆ ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಪರಮೇಶ್ ವಿರುದ್ಧ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಶಿಕ್ಷಕ ರಮೇಶ್ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಡಿಡಿಪಿಐ ಬಿ.ಆರ್ ನಾಯಕ್ ಹಾಗೂ ತಾಲೂಕಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನಿಂದ ಮಾಹಿತಿ ಪಡೆದಿದ್ದಾರೆ. ಬಾಲಕ ತಾನು ಕಲಿಯುತ್ತಿದ್ದ ಶಾಲೆಗೆ ಹೋಗಲು ಹೆದರುತ್ತಿದ್ದು ಮನೆಯವರು ಸಲ್ಲಿಸಿದ ಮನವಿಯಂತೆ ಆತನಿಗೆ ಬೇರೆ ಶಾಲೆಯಲ್ಲಿ ಕಲಿಯಲು ಅವಕಾಶ ಒದಗಿಸಿರುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಬಾಲಕನ ಮೇಲೆ ಹಲ್ಲೆಗೆ ಕಾರಣರಾದ ಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು ಅಗತ್ಯ ಕ್ರಮಕೈಗೊಳ್ಳುವು ದಾಗಿಯೂ ತಿಳಿಸಿದ್ದಾರೆ.