ತಿರುವನಂತಪುರಂ:ತಿರುವಾಂಕೂರು ದೇವಸ್ವಂ ಮಂಡಳಿಯು ನಿಲಕ್ಕಲ್‌ನಲ್ಲಿ ಪಾರ್ಕಿಂಗ್‌ಗಾಗಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದ ಶಬರಿಮಲೆ ಕಡೆಗೆ ಹೋಗುವ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್ ಹೊಂದಿರಬೇಕು ಎಂದು ಡಿಜಿಪಿ ಶೇಖ್ ದರ್ವೇಶ್ ಸಾಹೇಬ್ ಬುಧವಾರ ಹೇಳಿದ್ದಾರೆ.
ಶಬರಿಮಲೆಗೆ ಹೋಗುವ ಯಾವುದೇ ವಾಹನಗಳನ್ನು ಅಲಂಕರಿಸಬಾರದು ಎಂದು ಅವರು ಸಲಹೆ ನೀಡಿದರು. ಸುರಕ್ಷಿತ ಶಬರಿಮಲೆ ಮಂಡಲಂ-ಮಕರವಿಳಕ್ಕು ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಮಾಡಲಾದ ಎಲ್ಲಾ ವ್ಯವಸ್ಥೆಗಳನ್ನು ಡಿಜಿಪಿ ಪರಿಶೀಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಂದ ಎಲ್ಲ ಬಂದೋಬಸ್ತ್ ಮಾಡಲಾಗಿದೆ. ಈ ತೀರ್ಥಯಾತ್ರೆಯಲ್ಲಿ ಆರು ಹಂತಗಳಲ್ಲಿ ಒಟ್ಟು 13,000 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.
“ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಸರತಿ ಸಾಲು ವ್ಯವಸ್ಥೆ ಮಾಡಲಾಗುವುದು. ಸನ್ನಿಧಾನಂ, ನಿಲಕ್ಕಲ್ ಮತ್ತು ವಡಸೇರಿಕ್ಕರದಲ್ಲಿ ಮೂರು ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಭದ್ರತಾ ವ್ಯವಸ್ಥೆಗಳ ಭಾಗವಾಗಿ ಡ್ರೋನ್ ಸೌಲಭ್ಯವನ್ನು ಸಹ ಬಳಸಲಾಗುವುದು” ಎಂದು ಅವರು ಹೇಳಿದರು.