ಮಂಗಳೂರು: ಸರಗಳ ಕಳವುಗೈದ ಕುಖ್ಯಾತ ಆರೋಪಿಯನ್ನು ಹೆಡೆಮುರಿಕಟ್ಟಿ ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು 2.41 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯ ಚಂದ್ರಶೇಖರ (29) ಬಂಧಿತ ಆರೋಪಿ. ಮಂಗಳೂರು ನಗರದ ಬಿಜೈ ಚರ್ಚ್ ಮೈನ್ ರೋಡ್ ನಲ್ಲಿ ಅ.21ರ ಮುಂಜಾನೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಆಗ ಇಬ್ಬರು ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದ ಸರ ಎಳೆದೊಯ್ದು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ ಪೊಲೀಸ್ ಘಟಕದಿಂದ ವಿಶೇಷ ತಂಡವನ್ನು ರಚಿಸಿ ಇಂದು ಆರೋಪಿ ಚಂದ್ರಶೇಖರನನ್ನು ಬಂಗ್ರ ಕೂಳೂರು ಬಳಿ ಬಂಧಿಸಿದ್ದಾರೆ. ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ 21.300 ಗ್ರಾಂ ತೂಕದ ತುಂಡಾದ ಚಿನ್ನದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮೇಲೆ ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ, ಕುಂಬ್ಳಗೋಡು, ಬಿಡದಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಕೊಲೆ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.