ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 45 ಮಂದಿ ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ದೆಹಲಿ, ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೊಚ್ಚಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕಲಮಸ್ಸೆರಿಯ ಕೇಂದ್ರದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಕೆಲವೇ ಗಂಟೆಗಳ ನಂತರ 48 ವರ್ಷದ ವ್ಯಕ್ತಿ ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಶರಣಗಾಗಿದ್ದಾನೆ.
ಈತ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ ಅದೇ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ.
ಹಲೋ, ನನ್ನ ಹೆಸರು ಮಾರ್ಟಿನ್. ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಗೆ ಬಗ್ಗೆ ನಿಮಗೆ ಸುದ್ದಿ ಸಿಕ್ಕಿರಬಹುದು. ಅಲ್ಲಿ ಏನು ನಡೆದಿದೆ ಎಂಬ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲ. ಘಟನೆ ನಡೆದಿದೆ, ಏನಾದರೂ ಸಂಭವಿಸಿದೆ ಎಂಬುದು ಖಚಿತ . ಆ ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.
ಯಹೋವನ ಸಾಕ್ಷಿಗಳ ಗುಂಪಿನಲ್ಲಿ ನಾನು ಕಳೆದ 16 ವರ್ಷಗಳಿಂದ ಗುರುತಿಸಿಕೊಂಡಿದ್ದೆ. ಆದರೆ ಕಳೆದ ಆರು ವರ್ಷಗಳ ಹಿಂದೆ ಈ ಪಂಗಡವು ತಪ್ಪಾದ ಪಂಗಡವೆಂದು ನನಗೆ ಅರಿವಾಯಿತು. ನೀವು ಬೋಧಿಸುತ್ತಿರುವ ವಿಚಾರಗಳು ತಪ್ಪು ಎಂದು ಸಂಬಂಧಪಟ್ಟವರಲ್ಲಿ ತಿಳಿಸಿದೆ. ಆದರೆ ಅವರು ಅದಕ್ಕೆ ಮನ್ನಣೆ ನೀಡಲಿಲ್ಲ. ಇವರು ಈ ದೇಶದಲ್ಲಿದ್ದುಕೊಂಡು ಈ ದೇಶದ ಜನರೊಂದಿಗೆ ಬೆರೆಯಬಾರದು, ಅವರು ವೇಶ್ಯೆಯಂತೆ, ಅವರೊಂದಿಗೆ ವ್ಯವಹರಿಸಬಾರದು ಎಂದು ಬೋಧಿಸುತ್ತಾರೆ ಎಂದು ಆರೋಪಿಸಿದ್ದಾನೆ.
4 ವರ್ಷದ ಮಗುವಿಗೂ ಇವರು ನಿನ್ನ ಸ್ನೇಹಿತ ನೀಡಿದ ಚಾಕೊಲೇಟ್ ತಿನ್ನಬಾರದೆಂದು ಕಲಿಸಿಕೊಡುತ್ತಾರೆ. ಇದು ಯಾವ ರೀತಿಯ ಬೋಧನೆ. ಆ ಮಗುವಿನ ಮನಸ್ಥಿತಿ ಹೇಗಿರಬೇಡ. ನಾಲ್ಕು ವರ್ಷದಿಂದಲೇ ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಸರ್ಕಾರಿ ಸೇವೆಗೆ ಸೇರಬಾರದು, ದೇಶ ಭಕ್ತಿ ಗೀತೆ ಹಾಡಬಾರದು, ಸೇನೆಗೆ ಸೇರಬಾರದು, ಮತದಾನ ಮಾಡಬಾರದು ಎಂದು ಕಲಿಸಿಕೊಡುತ್ತಾರೆ. ಇಂತಹ ಬೋಧನೆ ಮಾಡುವವರಿಗೆ ಇನ್ನು ಏನು ಮಾಡಬೇಕು. ಭೂಮಿಯಲ್ಲಿ ಎಲ್ಲರೂ ನಾಶವಾಗುತ್ತಾರೆ, ಯಹೋವನ ಸಾಕ್ಷಿಗಳ ಗುಂಪು ಮಾತ್ರ ಬದುಕುಳಿಯುತ್ತಾರೆ ಎಂದು ಬೋಧಿಸುತ್ತಾರೆ. ಇವರು ಜನರ ನಾಶವನ್ನು ಬಯಸುತ್ತಾರೆ. ಇವರನ್ನು ಇನ್ನು ಏನು ಮಾಡಬೇಕು? ಈ ಪಂಗಡವು ತಪ್ಪಾದ ಪಂಗಡ. ಹಾಗಾಗಿ, ಬಹಳ ಯೋಚಿಸಿ ಬಾಂಬ್ ಇಡುವ ತೀರ್ಮಾನ ಮಾಡಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈ ತಪ್ಪಾದ ಪಂಗಡ ನಮ್ಮ ದೇಶದಲ್ಲಿ ಇರಬಾರದು. ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ. ಪೊಲೀಸರಿಗೆ ಶರಣಾಗುತ್ತೇನೆ. ಬಾಂಬ್ ತಯಾರಿಸುವ ವಿಡಿಯೋವನ್ನು ಯಾರೂ ಕೂಡ ಜನರಿಗೆ ತೋರಿಸಬಾರದು. ಜನಸಾಮಾನ್ಯನಿಗೆ ಬಾಂಬ್ ತಯಾರಿಸುವ ಅರಿವು ಬಂದುಬಿಟ್ಟರೆ ದೊಡ್ಡ ಅಪಾಯವಾಗಬಹುದು ಎಂದು ಬಾಂಬ್ ಸ್ಫೋಟ ನಡೆಸಿರುವ ಹೊಣೆ ಹೊತ್ತುಕೊಂಡಿರುವ ಡೊಮಿನಿಕ್ ಮಾರ್ಟಿನ್ ಹೇಳಿಕೊಂಡಿದ್ದಾನೆ.
ಇಂದು ನಡೆದ ಕ್ರಿಶ್ಚಿಯನ್ ಧಾರ್ಮಿಕ ಪ್ರಾರ್ಥನೆ ಸಭೆಯಲ್ಲಿ ಸುಮಾರು 2,000 ಜನರು ಭಾಗವಹಿಸಿದ್ದರು. ಪ್ರಾರ್ಥನೆಯ ಮಧ್ಯೆ ಸ್ಫೋಟ ಸಂಭವಿಸಿದೆ ಎಂದು ಕನ್ವೆನ್ಷನ್ ಸೆಂಟರ್‌ನಲ್ಲಿದ್ದ ಜನರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟಿಫಿನ್ ಬಾಕ್ಸ್ ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
45 ಗಾಯಾಳುಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 18 ಜನರು ಐಸಿಯುನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡಿರುವ ಐವರ ಸ್ಥಿತಿ ಚಿಂತಾಜನಕವಾಗಿದೆ.