ಪುತ್ತೂರು: ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಮಾಣಿ – ಮೈಸೂರು ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆ ಉರ್ಲಂಡಿ ಬಳಿ ಪಲ್ಟಿಯಾದ ಘಟನೆ ನಡೆದಿದೆ. ಈ ವೇಳೆ ಟ್ಯಾಂಕರ್ ನಿಂದ ಪಾಮ್ ಆಯಿಲ್ ಸೋರಿಕೆ ರಸ್ತೆಯಲ್ಲೆಲ್ಲಾ ಹರಿದು ಹೋದ ಘಟನೆ ಅಕ್ಟೋಬರ್ 18ರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಸುಳ್ಯದ ಕಡೆಗೆ ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್ ತೆರಳುತ್ತಿತ್ತು, ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಟ್ಯಾಂಕರ್ ನಲ್ಲಿದ್ದ ಪಾಮ್ ಆಯಿಲ್ ಸೊರಿಕೆಯಾದ ಹಿನ್ನಲೆ ರಸ್ತೆ ತುಂಬೆಲ್ಲಾ ಆಯಿಲ್ ಹರಿದಿತ್ತು. ತಕ್ಷಣ ಸ್ಥಳೀಯರು ಆಗಮಿಸಿ, ಇತರರಿಗೆ ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಿದರು. ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಚಾಲಕನನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.