ಮಂಗಳೂರು: ಇಸ್ರೇಲ್ ಮೇಲೆ ದಾಳಿ ನಡೆಸಿ ಸಾವು – ನೋವುಗಳಿಗೆ ಕಾರಣವಾದ ಹಮಾಸ್ ಬಂಡುಕೋರರನ್ನು ಬೆಂಬಲಿಸಿದ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ಸುಮೋಟೊ ಪ್ರಕರಣದಲ್ಲಿ ಬಂಧಿಸಿದ್ದಾರೆ. ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದ ಮಂಗಳೂರು ಬಂದರಿನ ಝಾಕಿರ್ ನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೆಸ್ತೈನ್ ಹಾಗೂ ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್ ಬಂಡುಕೋರರ ಬಗ್ಗೆ ಎಲ್ಲರೂ ಪ್ರಾರ್ಥನೆ ಮಾಡಬೇಕೆಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ವಾಟ್ಸಾಪ್‌ನಲ್ಲಿ ಹರಿಯಬಿಟ್ಟಿದ್ದ. ಈ ವೀಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ಆದ್ದರಿಂದ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು, ಮಂಗಳೂರು ಉತ್ತರ ಠಾಣಾ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಸುಮೋಟೊ ಪ್ರಕರಣ ದಾಖಲಿಸಿ ಆರೋಪಿ ಜಾಕಿರ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯ ಮೇಲೆ ಈ ಹಿಂದೆಯೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿದೆ.