ಪಾಟ್ನಾ: ದೆಹಲಿ- ಕಾಮಾಕ್ಯ ನಾರ್ತ್ ಈಸ್ಟ್ ಸೂಪರ್‌ಫಾಸ್ಟ್ ರೈಲಿನ ಆರು ಬೋಗಿಗಳು ಬುಧವಾರ ಬಿಹಾರದ ಬಕ್ಸರ್ ಸಮೀಪ ಹಳಿ ತಪ್ಪಿ ಉಂಟಾದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಸೂಪರ್‌ಫಾಸ್ಟ್ ರೈಲು ರಾತ್ರಿ 9.35ರ ಸುಮಾರಿಗೆ ರಘುನಾಥಪುರ ನಿಲ್ದಾಣದ ಬಳಿ ಹಳಿ ತಪ್ಪಿದೆ. ಎರಡು ಎಸಿ 3 ಟೈರ್ ಬೋಗಿಗಳು ಬುಡಮೇಲಾಗಿದ್ದು, ಇತರ ನಾಲ್ಕು ಬೋಗಿಗಳು ಹಳಿಯಿಂದ ಆಚೆಗೆ ಎಸೆಯಲ್ಪಟ್ಟಿವೆ.
“ಆನಂದ್ ವಿಹಾರ್ ಟರ್ಮಿನಲ್ ನಿಂದ ಕಾಮಾಕ್ಯಗೆ ತೆರಳುತ್ತಿದ್ದ ರೈಲುಗಾಡಿ ಸಂಖ್ಯೆ 12506 ನಾರ್ತ್ಈಸ್ಟ್ ಎಕ್ಸ್ಪ್ರೆಸ್ ರೈಲಿನ ಕೆಲ ಬೋಗಿಗಳು ರಾತ್ರಿ 9.35ರ ವೇಳೆಗೆ ದಾನಾಪುರ ವಿಭಾಗದ ರಘುನಾಥಪುರ ನಿಲ್ದಾಣ ಬಳಿ ಹಳಿತಪ್ಪಿವೆ. ಸಹಾಯವಾಣಿ ಸಂಖ್ಯೆ ಪಿಎನ್ ಬಿಇ-9771449971, ಡಿಎನ್ಆರ್- 8905697493, ಎಆರ್ಎ- 8306182542, ಸಿಓಎಂಎಲ್ ಸಿಎಲ್ಎಲ್- 7759070004” ಎಂದು ಉತ್ತರ ರೈಲ್ವೆ ಹೇಳಿಕೆ ನೀಡಿದೆ.“ನಾಲ್ಕು ಸಾವುಗಳು ದೃಢಪಟ್ಟಿವೆ… 21 ಬೋಗಿಗಳು ಹಳಿ ತಪ್ಪಿವೆ” ಎಂದು ಪೂರ್ವ ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕ ತರುಣ್ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಗಿದ ತಕ್ಷಣ ಈ ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಂತ್ರಸ್ಥರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಾಚರಣೆ ಮುಗಿದಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. “ಎಲ್ಲ ಬೋಗಿಗಳನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರನ್ನು ಮುಂದಿನ ಪಯಣಕ್ಕಾಗಿ ವಿಶೇಷ ರೈಲಿಗೆ ಸ್ಥಳಾಂತರಿಸಲಾಗಿದೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಅವರು ಹೇಳಿದ್ದಾರೆ.