ಮಂಗಳೂರು: ಕೆಎಸ್ಆರ್ ಟಿಸಿ ಮಂಗಳೂರು ವಿಭಾಗ ಕಳೆದ ವರ್ಷ ಆರಂಭಿಸಿದ್ದ ‘ದಸರಾ ದರ್ಶಿನಿ’ ಪ್ರವಾಸ ಪ್ಯಾಕೇಜ್ ಈ ಬಾರಿಯೂ ಪ್ರವಾಸಿಗರಿಗೆ ಲಭ್ಯವಾಗಲಿದೆ. ಇದರ ಜೊತೆ ಈ ಬಾರಿ ಪಂಚ ದುರ್ಗಾ ಪ್ಯಾಕೇಜ್ ಕೂಡಾ ಪ್ರವಾಸಿಗರಿಗೆ ಲಭ್ಯವಾಗಲಿದ್ದು, ಈ ಪ್ಯಾಕೇಜ್‌ನಡಿ ಚಿತ್ರಾಪುರ ಬೀಚ್ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಮೈಸೂರನ್ನು ಹೊರತುಪಡಿಸಿ ರಾಜ್ಯದಲ್ಲಿ ಮಂಗಳೂರು ದಸರಾ ಜನಪ್ರಿಯವಾಗಿದ್ದು, ವಿವಿಧ ರಾಜ್ಯ, ವಿವಿಧ ಜಿಲ್ಲೆ ಹಾಗೂ ವಿದೇಶಗಳಿಂದಲೂ ಮಂಗಳೂರು ದಸರಾ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಾರೆ. ಈ ಪ್ರವಾಸಿಗ ಪ್ರಯಾಣಿಕರಿಗೆ ಒಂದೇ ವಾಹನದಡಿ ವಿವಿಧ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಳೆದ ಬಾರಿ ಕೆಎಸ್ಆರ್ ಟಿಸಿ ಮಂಗಳೂರು ವಿಭಾಗ ದಸರಾ ದರ್ಶಿನಿ ಪ್ರವಾಸ ಪ್ಯಾಕೇಜ್ ಆರಂಭಿಸಿತ್ತು. ಅದಕ್ಕೆ ಉತ್ತಮ ಸ್ಪಂದನೆ ದೊರಕಿರುವ ಕಾರಣ ಆ ಪ್ರವಾಸ ಪ್ಯಾಕೇಜ್ ಮುಂದುವರಿಸುವ ಜೊತೆ ಮತ್ತೊಂದು ಹೊಸ ಪ್ಯಾಕೇಜ್‌ಗೆ ಕೆಎಸ್ಆರ್ ಟಿಸಿ ಮುಂದಾಗಿದೆ. ‘ಪಂಚದುರ್ಗಾ ದರ್ಶಿನಿ’ ಪ್ರವಾಸ ಪ್ಯಾಕೇಜ್‌ನಡಿ ತಲಪಾಡಿ ದೇವಿನಗರದ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರೀ, ಮುಂಡ್ಕೂರು ದುರ್ಗಾ ಪರಮೇಶ್ವರೀ ಹಾಗೂ ಮುಲ್ಕಿಯ ಬಪ್ಪನಾಡು ಕ್ಷೇತ್ರಕ್ಕೆ ಭೇಟಿಯ ಬಳಿಕ ಚಿತ್ರಾಪುರ ಬೀಚ್ ಗೂ ಪ್ರವಾಸಿಗರನ್ನು ಕೊಂಡೊಯ್ಯಲಾಗುವುದು. ಈ ಪ್ಯಾಕೇಜ್ ಕೆಎಸ್ಆರ್ ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಒಬ್ಬರಿಗೆ ಟಿಕೆಟ್ ದರ ತಲಾ 400 ರೂ. ಹಾಗೂ ಮಕ್ಕಳಿಗೆ 300 ರೂ. ದರದಲ್ಲಿ ಲಭ್ಯವಾಗಲಿದೆ ಎಂದು ಕೆಎಸ್ಆರ್ ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ. ಪಂಚದುರ್ಗಾ ಹಾಗೂ ದಸರಾದರ್ಶಿನಿ ಪ್ಯಾಕೇಜ್ ನಡಿ ಕೆಎಸ್ಆರ್ ಟಿಸಿ ಸಾಮಾನ್ಯ ಅಥವಾ ಎಸಿ ಬಸ್ ಗಳಲ್ಲಿ ಅ. 15ರಿಂದ 24ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿಯಿಂದ ಹೊರಟು ರಾತ್ರಿ 9ಕ್ಕೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹಿಂತಿರುಗಲಿದೆ. ದಸರಾ ದರ್ಶನ ಜೊತೆಗೆ ಕೊಲ್ಲೂರು, ಮಾರಣಕಟ್ಟೆ, ಕಮಲಶಿಲೆ, ಉಚ್ಚಿಲ ಹಾಗೂ ಮಡಿಕೇರಿ, ಅಬ್ಬಿಫಾಲ್ಸ್, ಕುಶಾಲನಗರ ಸಂದರ್ಶಿಸುವ ಪ್ರತ್ಯೇಕ ಪ್ರವಾಸ ಪ್ಯಾಕೇಜ್ ಇರಲಿದೆ. ಮಂಗಳೂರು ದಸರಾ ದರ್ಶಿನಿ ಪ್ಯಾಕೇಜ್, ಸಾಮಾನ್ಯ ಸಾರಿಗೆ ಬಸ್‌ನಲ್ಲಿ ಒಬ್ಬರಿಗೆ 400 ರೂ., ಮಕ್ಕಳಿಗೆ 300 ರೂ., ಎಸಿ ಬಸ್ ನಲ್ಲಿ ಒಬ್ಬರಿಗೆ 500 ರೂ. ಮಕ್ಕಳಿಗೆ 400 ರೂ.ದರ ನಿಗದಿಪಡಿಸಲಾಗಿದೆ. ಮಹಿಳೆಯರ ಉಚಿತ ಪಂಚದುರ್ಗಾ ಹಾಗೂ ದಸರಾ ದರ್ಶಿನಿ ಪ್ಯಾಕೇಜ್ ನಡಿ’ ಪ್ರಯಾಣದ ಶಕ್ತಿ ಯೋಜನೆ ಈ ಪ್ಯಾಕೇಜ್ ಗಳಿಗೆ ಅನ್ವಯಿಸುವುದಿಲ್ಲ.