ಶೂನ್ಯ ವಿದ್ಯುತ್ ಬಿಲ್ ನೀಡಲು ಸಮಸ್ಯೆ ತಂದೊಡ್ಡಿದ್ದ ಕ್ಯೂಆರ್ ಕೋಡ್ ರದ್ದು..!
ಮಂಗಳೂರು : ಶೂನ್ಯ ಮೊತ್ತದ ಬಿಲ್‌ಗೆ ಅನಗತ್ಯವಾಗಿರುವ ಕ್ಯೂಆರ್ ಕೋಡ್ ಮುದ್ರಣವನ್ನು ಬಿಲ್‌ನಿಂದ ತೆಗೆದುಹಾಕಲಾಗಿದ್ದು ಹೊಸ ತಂತ್ರಾಂಶ ಅಳವಡಿಸಿರುವ ರೀಡಿಂಗ್ ಮೆಷಿನ್‌ಗಳನ್ನು ಮೀಟರ್ ರೀಡರ್‌ಗಳಿಗೆ ಸಂಬಂಧಪಟ್ಟ ಕಂಪನಿ ಮೆಸ್ಕಾಂ ಮೂಲಕ ಬುಧವಾರ ನೀಡಿದೆ.ಬಿಲ್ ಮೊತ್ತ ಕಟ್ಟಲು ಇರುವ ಬಿಲ್ ಮೊತ್ತ ಪಾವತಿಸಲು ಇರುವ ಬಿಲ್‌ಗಳಿಗೆ ಮಾತ್ರ ಕ್ಯೂಆರ್ ಕೋಡ್ ಮುದ್ರಣವಾಗಲಿದೆ.ವಿದ್ಯುತ್ ಬಿಲ್‌ನಲ್ಲಿ ಬರುವ ಕ್ಯೂಆರ್ ಕೋಡ್‌ನಿಂದಾಗಿ ಮೀಟರ್ ರೀಡಿಂಗ್ ಮೆಷಿನ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತಿತ್ತು.ಇದರಿಂದ ದಿನವೊಂದಕ್ಕೆ 150 ರಷ್ಟು ನಡೆಯುತ್ತಿದ್ದ ಮೀಟರ್ ರೀಡಿಂಗ್ 60 ರಿಂದ 70ರಷ್ಟು ಮಾತ್ರ ನಡೆಸಲು ಸಾಧ್ಯವಾಗುತ್ತಿತ್ತು.ಇದರಿಂದ ನಿಗದಿತ ದಿನದಲ್ಲಿ ಮೀಟರ್ ರೀಡಿಂಗ್ ನಡೆಸಲು ಮೀಟರ್ ರೀಡರ್ ಗಳು ಭಾರಿ ಸಮಸ್ಯೆ ಎದುರಿಸುತ್ತಿದ್ದು ಗ್ರಾಹಕರ ಮೇಲೂ ಪರಿಣಾಮ ಬೀರಿತ್ತು.ಒಂದು ಪರಿಸರದ ಮೀಟರ್ ರೀಡಿಂಗ್ ಮತ್ತೆ ಮತ್ತೆ ತೆರಳಬೇಕಾಗಿ ಬರುತ್ತಿದ್ದು ಉಳಿದೆಡೆ ನಿಗದಿತ ದಿನ ಕಳೆದ ಬಳಿಕ ಮೀಟರ್ ರೀಡಿಂಗ್ ಆಗುತ್ತಿತ್ತು.ಈ ಕಾರಣ ಗೃಹಜ್ಯೋತಿ ಯೋಜನೆಯಲ್ಲಿ ಬಳಸಬಹುದಾಗಿದ್ದ ಗರಿಷ್ಠ ಮಿತಿಗಿಂತ ಅಧಿಕ ವಿದ್ಯುತ್ ಬಳಕೆಯಾಗಿ ಹಲವಾರು ಗ್ರಾಹಕರು ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗುವುದು ಕಂಡುಬಂದಿತ್ತು.ಇದಕ್ಕಾಗಿ ಮೆಸ್ಕಾಂ ಕಚೇರಿಗೆ ಅಲೆದು ಯೂನಿಟ್ ಸರಿದೂಗಿಸುವ ಕೆಲಸವನ್ನು ನಡೆಸುವ ಅನಿವಾರ್ಯತೆ ಉಂಟಾಗಿತ್ತು.ಪ್ರಸ್ತುತ ಗೃಹಜ್ಯೋತಿ ಯೋಜನೆಯಿಂದ ಅತಿಹೆಚ್ಚಿನ ಗ್ರಾಹಕರಿಗೆ ಶೂನ್ಯ ಬಿಲ್ ಬರುವ ಕಾರಣದಿಂದ ಕೆಲವೊಂದು ಬಿಲ್‌ಗಳಿಗೆ ಮಾತ್ರ ಕ್ಯೂಆರ್ ಕೋಡ್ ಮೂಡಿ ಬರಲಿದೆ.ಇದರಿಂದ ಇನ್ನು ಮುಂದೆ ಮೀಟರ್ ರೀಡಿಂಗ್ ಮೆಷಿನ್‌ಗಳ ಬ್ಯಾಟರಿ ಹೆಚ್ಚು ಕಾಲ ಚಾರ್ಜ್ ನಿಲ್ಲಲಿದ್ದು ಗ್ರಾಹಕರಿಗೆ ನಿಗದಿತ ದಿನಾಂಕದೊಳಗೆ ಬಿಲ್ ತಲುಪುವ ನಿರೀಕ್ಷೆ ಇದೆ.ಶೂನ್ಯ ಬಿಲ್‌ನಲ್ಲಿ ಕಟ್ಟಬೇಕಾದ ಕೊನೆ ದಿನಾಂಕ ಸಹಿತ ಇನ್ನಿತರ ಅನಗತ್ಯ ವಿಚಾರಗಳು ಇದ್ದು, ಅವುಗಳನ್ನು ತೆಗೆದು ಹಾಕಿದರೆ ರೀಡಿಂಗ್ ಮೆಷಿನ್‌ಗಳ ಇನ್ನಷ್ಟು ದೀರ್ಘಕಾಲ ಚಾರ್ಜ್ ನಿಲ್ಲಬಹುದು ಎಂಬುದು ಮೀಟರ್‌ಗಳ ಅಭಿಪ್ರಾಯವಾಗಿದ್ದು ಈಗ ಹೊಸ ತಂತ್ರಾಂಶ ಅಳವಡಿಸಿರುವ ಬಿಲ್ಲಿಂಗ್ ಮೆಷಿನ್‌ಗಳ ಸ್ಥಿತಿ ಏನು ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.