ಬಂಟ್ವಾಳ: ಮಾರ್ಬಲ್ ಸಾಗಾಟ ಮಾಡುತ್ತಿದ್ದ ಲಾರಿ ರಿವರ್ಸ್ ತೆಗೆಯುತ್ತಿದ್ದ ವೇಳೆ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ವಿಟ್ಲ ಕರೋಪಾಡಿ ಸಮೀಪ ನಡೆದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಮಾರ್ಬಲ್ ತುಂಬಿಕೊಂಡು ಬಂದಿದ್ದ ಲಾರಿಯು ಅನ್ಲೋಡ್ ಮಾಡಲೆಂದು ರಿವರ್ಸ್ ತೆಗೆಯಲಾಗುತ್ತಿತ್ತು. ಈ ವೇಳೆ ರಿವರ್ಸ್ ಗೇರ್ ಹಾಕುವಾಗ ಚಾಲಕನ ಹತೋಟಿ ತಪ್ಪಿದ ಲಾರಿ ಅಲ್ಲಿಯೇ ಇದ್ದ ಮನೆಯೊಂದರ ನೀರಿನ ತೊಟ್ಟಿಗೆ ಮಗುಚಿ ಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ಮೃತಪಟ್ಟಿದ್ದರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಗಾಯಾಳುಗಳನ್ನು ನಾಲ್ಕು ಆ್ಯಂಬುಲೆನ್ಸ್ ಗಳಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ಏಕಾಏಕಿ ಮಗುಚಿ ಬಿದ್ದ ಪರಿಣಾಮ ಸಮೀಪದ ಮನೆಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಡಿಯೂರಿನ ಶಾಲೆಯ ಕಟ್ಟಡಕ್ಕೆ ಹಾಕಲು ಬೈಕಂಪಾಡಿಯಿಂದ ಮಾರ್ಬಲ್ ತರಿಸಲಾಗಿತ್ತು. ಲಾರಿಯನ್ನು ಶಾಲೆಯ ಪ್ರವೇಶ ದ್ವಾರದ ಬಳಿ ನಿಲ್ಲಿಸಿ ಮಾರ್ಬಲ್ ಅನ್ಲೋಡ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಾರ್ಬಲ್ ಕೂಡಾ ಹಾನಿಯಾಗಿದೆ.