ಮಂಗಳೂರು: “ಡಾ. ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತ ಪಡಿಸುವ ರಾಧಾಕೃಷ್ಣ ಪಿಕ್ಟರ್‌ನ ಕೇಶವ್ ಆರ್. (ದೇವಸಂದ್ರ) ನಿರ್ಮಾಣದ ಉದಯ್ ಕುಮಾರ್ ನಿರ್ದೇಶನದ “ಬನ್-ಟೀ” ಕನ್ನಡ ಚಲನಚಿತ್ರವು ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಮಂಗಳೂರಿನಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ” ಎಂದು ನಿರ್ದೇಶಕ ಉದಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರವಿಕಿರಣ್ ಅವರ ಚಿತ್ರಕಥೆ-ಸಂಭಾಷಣೆ ಹೊಂದಿರುವ, ರಾಜರಾವ್ ಅಂಚಲ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ, ಪ್ರದ್ಯೋತ್ತನ್ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರದಲ್ಲಿ ಬಾಲಕಲಾವಿದರಾಗಿರುವ ಮೌರ್ಯ ಮತ್ತು ಮಂಗಳೂರಿನ ತನ್ಮಯ್ ಆರ್. ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಮಕ್ಕಳ ಮೇಲೆ ಇಡೀ ಚಿತ್ರದ ಕಥೆ ಸಾಗುತ್ತದೆ. ಉಳಿದಂತೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಉಮೇಶ್ ಸಕ್ಕರೆನಾಡ್, ಶ್ರೀದೇವಿ, ನಿಶಾ ಯಶ್‌ರಾಮ್, ಗುಂಡಣ್ಣ ಚಿಕ್ಕಮಗಳೂರು ಮೊದಲಾದವರು ನಟಿಸಿದ್ದಾರೆ. ನೈಜ ಘಟನೆ ಆಧರಿಸಿ ನಮ್ಮ ಶಿಕ್ಷಣ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ. ಅತ್ಯಂತ ಕುತೂಹಲಕಾರಿಯಾಗಿ ನಾನಾ ಘಟನೆಗಳೊಂದಿಗೆ ಸಾಗುವ ಚಿತ್ರದಲ್ಲಿ ಮಾರಲ್ ಎಜುಕೇಶನ್‌ಗಿಂತ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂಬ ಸೂತ್ರದಡಿ ಶಿಕ್ಷಣ ಸಂಸ್ಥೆ, ಮಕ್ಕಳು, ಹೆತ್ತವರು ನಿಗಾ ಇಡುತ್ತಿರುವ ಬಗ್ಗೆ, ಮಕ್ಕಳಿಗೆ ಕ್ರಿಯೇಟಿವ್ ಎಜುಕೇಶನ್ ನೀಡಬೇಕು ಎಂಬ ಅಂಶಗಳ ಜತೆಗೆ ಭಾವನಾತ್ಮಕವಾಗಿ ಚಿತ್ರ ಮೂಡಿಬಂದಿದೆ. ಬನ್-ಟೀ ಚಿತ್ರೀಕರಣವೂ ವಿಭಿನ್ನ ರೀತಿಯಲ್ಲಿ ನಡೆಸಲಾಗಿದ್ದು, ಎಲ್ಲೂ ಸೆಟ್‌ಗಳನ್ನು ಬಳಸದೇ ಬೆಂಗಳೂರಿನ ರಿಯಲ್ ಲೋಕೇಶನ್‌ಗಳಾದ ಸ್ಲಮ್, ಮಾರ್ಕೆಟ್ ಮುಂತಾದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಮಂಗಳೂರಿನ ತನ್ಮಯ್ ಶೆಟ್ಟಿ! ಮಂಗಳೂರಿನ ಬಾಲ ಕಲಾವಿದ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ತನ್ಮಯ್ ಆರ್. ಶೆಟ್ಟಿ ಬೆಂಗಳೂರಿಗೆ ಆಗಮಿಸಿ ಸುಮಾರು ಒಂದು ತಿಂಗಳ ಕಾಲ ಸ್ಲಮ್‌ನಲ್ಲಿ ನಡೆದ ಶೂಟಿಂಗ್ ಸೇರಿದಂತೆ ನಾನಾ ಲೋಕೇಶನ್ ನ ಚಿತ್ರೀಕರಣದಲ್ಲಿ ಭಾಗವಹಿಸಿ ಅದ್ಭುತ ಅಭಿನಯ ನೀಡಿದ್ದಾನೆ. ತನ್ಮಯ್ ಈಗಾಗಲೇ “ಮಗನೇ ಮಹಿಷ”, “ಅಬತರ” ತುಳು ಚಿತ್ರಗಳಲ್ಲಿ ನಟಿಸಿದ್ದು, ಬನ್-ಟೀ ಅಲ್ಲದೆ ಕನ್ನಡ ಸಿನಿಮಾಗಳಾದ ‘ಅಪರಾಧಿ ನಾನಲ್ಲ”, “ಕರಿಯಜ್ಞ ಕರಿಹೈದ”, “ಸ್ಕೂಲ್ ಲೀಡರ್” ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾನೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಉದಯ ಕುಮಾರ್ ಪಿ. ಎಸ್., ನಟ ಉಮೇಶ್ ಸಕ್ಕರೆನಾಡ್, ನಟಿ ಶ್ರೀದೇವಿ, ಕೆಮರಾಮ್ಯಾನ್ ರಾಜರಾವ್ ಅಂಚಲ್ ಕರ್, ಬಾಲನಟ ತನ್ಮಯ್ ಆರ್. ಶೆಟ್ಟಿ, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.