ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಪಿ.ಎಮ್ ಸ್ವ-ನಿಧಿ ಯೋಜನೆಯಡಿ ಈ ವರೆಗೆ ಸಾಲ ಪಡೆಯದೇ ಇರುವವರಿಗೆ ಸಾಲ ಸೌಲಭ್ಯ ನೀಡಲು ಕ್ರಮವಹಿಸಲಾಗುತ್ತಿದೆ.
ಈ ಕಿರು ಸಾಲ ಸೌಲಭ್ಯವು ಪ್ರಥಮ ಹಂತದಲ್ಲಿ 10 ಸಾವಿರ ರೂಪಾಯಿ, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯಧನ ಸೌಲಭ್ಯ ಮತ್ತು ಸಾಲ ಮರುಪಾವತಿಸಿದ ಬಳಿಕ ದ್ವಿತೀಯ ಹಂತದಲ್ಲಿ 20 ಸಾವಿರ ರೂಪಾಯಿ ಹಾಗೂ ತೃತೀಯ ಹಂತದಲ್ಲಿ 50 ಸಾವಿರ ರೂಪಾಯಿ ಬ್ಯಾಂಕ್ ಸಾಲ ಸೌಲಭ್ಯ ದೊರೆಯುತ್ತಿದೆ. ಡಿಜಿಟಲ್ ವ್ಯವಹಾರ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ವಾರ್ಷಿಕ 1,200 ರೂಪಾಯಿ ಕ್ಯಾಶ್ ಬ್ಯಾಕ್ ದೊರೆಯಲಿದೆ.
ಈ ವರೆಗೆ ಸಾಲ ಪಡೆಯದೇ ಇರುವ ಬೀದಿ ಬದಿ ವ್ಯಾಪಾರಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲು, ಬ್ಯಾಂಕ್ ಸಾಲ ವಿತರಿಸಲು, ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಬ್ಯಾಂಕ್ ಸಾಲ ಮಂಜೂರಾತಿ ಹಾಗೂ ನಗದು ಬಿಡುಗಡೆ ಮತ್ತು ಸ್ವ-ನಿಧಿ ಸಮೃದ್ಧಿ ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಒದಗಿಸುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸೆ.8ರ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಮಹಾನಗರಪಾಲಿಕೆಯ ಕೇಂದ್ರ ಕಚೇರಿ, ಸುರತ್ಕಲ್ ವಲಯ ಕಚೇರಿ, ಕದ್ರಿ ವಲಯ ಕಚೇರಿ, ನಗರದ ಕುದ್ಮುಲ್ ರಂಗರಾವ್ ಪುರಭವನದ, ಕಾವೂರು ಮಾರ್ಕೆಟ್, ವಾಮಂಜೂರು ವಾರ್ಡು ಕಚೇರಿ ಮತ್ತು ವೆಲೆನ್ಸಿಯಾ ವಾರ್ಡು ಕಚೇರಿಗಳಲ್ಲಿ ಸ್ವ-ನಿಧಿಯಿಂದ ಸಮೃದ್ದಿ ಮೇಳ ಹಾಗೂ ಮೈ ಬೀ ಡಿಜಿಟಲ್ ಕ್ಯಾಂಪ್ ಗಳನ್ನು ಆಯೋಜಿಸಲಾಗಿದೆ.
ನಗರದ ಬೀದಿ ಬದಿ ವ್ಯಾಪಾರಿಗಳು ಆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಲಭ್ಯ ಪಡೆಯುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.