Home ಕರಾವಳಿ ಪುತ್ತೂರು ಶಾಸಕ ಅಶೋಕ್ ರೈ ಆಪ್ತ ಗ್ರಾಮಪಂಚಾಯತ್ ಮಾಜಿ ಸದಸ್ಯನ ಮನೆಗೆ ನುಗ್ಗಿದ ಕಳ್ಳರು…!-ನಗ, ನಗದು...

ಪುತ್ತೂರು ಶಾಸಕ ಅಶೋಕ್ ರೈ ಆಪ್ತ ಗ್ರಾಮಪಂಚಾಯತ್ ಮಾಜಿ ಸದಸ್ಯನ ಮನೆಗೆ ನುಗ್ಗಿದ ಕಳ್ಳರು…!-ನಗ, ನಗದು ದರೋಡೆ

0

ಪುತ್ತೂರು : ಪುತ್ತೂರು ಶಾಸಕ ಅಶೋಕ್ ರೈ ಬೆಂಬಲಿಗ ಗ್ರಾಮಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಮನೆಗೆ ದರೋಡೆಕೋರರು ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ.


ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದ್ದು ಸೆಪ್ಟೆಂಬರ್ 7 ರ ಮುಂಜಾನೆ ಸುಮಾರು 2 ಗಂಟೆಗೆ ಮನೆಯ ಬಾಗಿಲು ಒಡೆದು ನುಗ್ಗಿದ ಸುಮಾರು 8 ಮಂದಿ ದರೋಡೆಕೋರರ ತಂಡ ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ಮತ್ತು ಸುಮಾರು 15 ಪವನ್ ಚಿನ್ನವನ್ನು ದರೋಡೆ ಮಾಡಿದೆ. ಮನೆಯೊಳಗೆ‌ ನುಗ್ಗಿದ ದರೋಡೆಕೋರರ ತಂಡ ಸುಮಾರು ಒಂದೂವರೆ ಗಂಟೆಗಳವರೆಗೆ ಮನೆಯೊಳಗೇ ಇದ್ದು, ಮನೆಯ ಎಲ್ಲಾ ಕಡೆಗಳಲ್ಲೂ ಹುಡುಕಾಡಿದೆ. ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದ ದರೋಡೆಕೋರರ ತಂಡ ಹಿಂಬಾಗಿಲಿನಿಂದ ಹೊರಗೆ ಹೋಗಿ ತಪ್ಪಿಸಿಕೊಂಡಿದೆ. ಹೊರಗೆ ಹೋಗುವ ಸಮಯದಲ್ಲಿ ಗುರು ಪ್ರಸಾದ್ ಅವರ ಕಟ್ಟಿದ‌ ಕೈಗಳನ್ನು ಬಿಚ್ಚಿ ದರೋಡೆಕೋರರು ಪರಾರಿಯಾಗಿದ್ದು, ಗುರುಪ್ರಸಾದ್ ಅವರ ಮೊಬೈಲ್ ಅನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ.ಘಟನೆಯ ಬಗ್ಗೆ ಗುರುಪ್ರಸಾದ್ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ‌.ಬಿ.ರಿಷ್ಯಂತ್ ಸೇರಿದಂತೆ ಹಲವು‌ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಜ.ರಿಷ್ಯಂತ್ ಮುಂಜಾನೆ ಸುಮಾರು 2 ಗಂಟೆಗೆ ಈ ಕೃತ್ಯ ನಡೆದಿದ್ದು, ದೂರುದಾರರ ಪ್ರಕಾರ ಸುಮಾರು 40 ಸಾವಿರ ರೂಪಾಯಿ ಹಾಗು ಚಿನ್ನ ದರೋಡೆ ಮಾಡಲಾಗಿದ್ದು, ದರೋಡೆ ಮಾಡಲಾದ ಚಿನ್ನ ಎಷ್ಟು ಅನ್ನೋದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಈಗಾಗಲೇ ಬೆರಳಚ್ಷು ತಜ್ಞರ ತಂಡ, ಶ್ವಾನದಳ, ವಿಧಿ-ವಿಜ್ಞಾನ ತಂಡ ಪರಿಶೀಲನೆಯನ್ನು ನಡೆಸಿದ್ದು, ದರೋಡೆಕೋರರ ಶೀಘ್ರವೇ ಬಂಧಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಪೋಲೀಸರ ಒಂದು ವಿಶೇಷ ತಂಡವನ್ನೂ ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ ಎಂದರು. ಪುತ್ತೂರು ಆಸುಪಾಸಿನಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುವ ಹಿನ್ಮಲೆಯಲ್ಲಿ ಈ ಬಗ್ಗೆಯೂ ಸೂಕ್ತ ತನಿಖೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here