Home ತಾಜಾ ಸುದ್ದಿ ದೇಶದ ಹೆಸರು ಬದಲಾವಣೆ ಕುರಿತು ಮಾತನಾಡುವುದನ್ನು ನಿಲ್ಲಿಸಿ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸಲಹೆ…!

ದೇಶದ ಹೆಸರು ಬದಲಾವಣೆ ಕುರಿತು ಮಾತನಾಡುವುದನ್ನು ನಿಲ್ಲಿಸಿ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸಲಹೆ…!

0

ದೇಶದ ಹೆಸರು ಬದಲಾಯಿಸುವ ಕುರಿತು ಮಾತನಾಡುವುದನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.


ಜಿ20 ಔತಣಕೂಟದ ಆಹ್ವಾನದಲ್ಲಿ ‘President of India’ ಬದಲು ‘President of Bharat’ ಎಂದು ಕೇಂದ್ರ ಸರ್ಕಾರವು ನಮೂದಿಸಿದೆ.

ಇದು ದೇಶದಲ್ಲಿ ರಾಜಕೀಯ ವಿವಾದ ಭುಗಿಲೇಳುವಂತೆ ಮಾಡಿದೆ.

ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್‌ ಎಂದು ಬದಲಾಯಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿರುವ ಮೋದಿ ದೇಶದ ಹೆಸರನ್ನು ಬದಲಾಯಿಸುವ ಕುರಿತು ಮಾತನಾಡುವುದನ್ನು ನಿಲ್ಲಿಸಿ ಎಂದು ತಮ್ಮ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸನಾತನ ಧರ್ಮದ ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಹೇಳಿಕೆಗಳನ್ನು ನೀಡಿದ್ದಾರೆ. ಈ ವಿವಾದದ ಕುರಿತು ಮಾತನಾಡಬಹುದು ಎಂದು ಸಚಿವರಿಗೆ ಮೋದಿ ಹೇಳಿದ್ದಾರೆ.

ಇಂಡಿಯಾವನ್ನು ಭಾರತ್‌ ಎಂದು ಬದಲಾಯಿಸಲು ಕೇಂದ್ರ ಮುಂದಾಗಿದೆಯೇ?

ಪ್ರತಿಪಕ್ಷಗಳು ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾವನ್ನು ಭಾರತ್‌ ಎಂದು ಬದಲಾಯಿಸಲು ಮೋದಿ ಸರ್ಕಾರ ಮುಂದಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ಕುರಿತು ಚರ್ಚೆ ಆಗಬಹುದು ಎಂದು ಹೇಳಲಾಗುತ್ತಿದೆ.

‘ಮೋದಿಯವರು ಇತಿಹಾಸವನ್ನು ತಿರುಚುವುದನ್ನು ಮುಂದುವರೆಸಬಹುದು. ಭಾರತವನ್ನು ವಿಭಜಿಸಬಹುದು. ಇದು ಭಾರತ. ಹಲವು ರಾಜ್ಯಗಳ ಒಕ್ಕೂಟವಾಗಿದೆ. ಅಷ್ಟಕ್ಕೂ, ಇಂಡಿಯಾ ಮೈತ್ರಿಪಕ್ಷಗಳ ಉದ್ದೇಶವೇನು? ಸೌಹಾರ್ದತೆ, ಸಮನ್ವಯತೆ ಹಾಗೂ ಸಮಾನತೆಗಳು ನಮ್ಮ ದ್ಯೇಯವಾಗಿವೆ. ಜುಡೇಗಾ ಇಂಡಿಯಾ, ಜೀತೇಗಾ ಭಾರತ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಹಲವಾರು ಬಿಜೆಪಿ ನಾಯಕರು ಮತ್ತು ಸಚಿವರು ದೇಶದ ಹೆಸರು ಬದಲಿಸುವ ಕ್ರಮವನ್ನು ಸ್ವಾಗತಿಸಿದ್ದಾರೆ. ‘ಭಾರತ್’ ಎಂಬ ಪದವು ಸಂವಿಧಾನದ 1 ನೇ ವಿಧಿಯಲ್ಲಿದೆ ಎಂದು ಹೇಳಿದ್ದಾರೆ.

‘ಇದು ಮೊದಲೇ ಆಗಬೇಕಿತ್ತು. ಇದರಿಂದ ಮನಸ್ಸಿಗೆ ಹೆಚ್ಚಿನ ತೃಪ್ತಿ ಸಿಗುತ್ತದೆ. ‘ಭಾರತ’ ನಮ್ಮ ಅಸ್ಮಿತೆ. ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ರಾಷ್ಟ್ರಪತಿಗಳು ಭಾರತಕ್ಕೆ ಆದ್ಯತೆ ನೀಡಿದ್ದಾರೆ. ಇದು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ದೊಡ್ಡ ಹೇಳಿಕೆಯಾಗಿದೆ’ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here