ಮಂಗಳೂರು: ಮಂಗಳೂರು ಪೋಲಿಸರು ಡ್ರಗ್ಸ್ ಮಾರಾಟ ಜಾಲದ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ದೇಶದ ಮಹಿಳೆಯೊಬ್ಬಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಮುಖ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚಿ ಲಕ್ಷಾಂತರ ಮೌಲ್ಯದ ಮಾದಕ ವಸ್ತು ಎಂಡಿಎಂಎ ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಡ್ರಗ್ ದಂಧೆಯ ಕಿಂಗ್ ಪಿನ್ ಅನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿದಾಗ ಈ ಮಾದಕ ವಸ್ತುಗಳನ್ನು ಆರೋಪಿಗಳಿಗೆ ನೈಜೀರಿಯಾ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ವಿದೇಶಿ ಮಹಿಳೆಯೊಬ್ಬಳು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ (Methylene dioxy methamphetamine) MDMA ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ್ದ ನೈಜೀರಿಯಾ ಮೂಲದ ಅಡೆವೊಲೆ ಅಡೆಟುಟು ಆನು @ ರೆಜಿನಾ ಜರಾ @ ಆಯಿಶಾ(33) ಎಂಬಾಕೆಯನ್ನು ಬಂಧಿಸಿದ್ದಾರೆ. ಬಂಧಿತಳ ವಶದಲ್ಲಿದ್ದ ಒಟ್ಟು 400 ಗ್ರಾಂ ತೂಕದ ರೂ. 20,00,000 -ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್-1, ನಗದು ರೂ. 2910/- ಅನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910/- ಎಂದು ಅಂದಾಜಿಸಲಾಗಿದೆ.