ಅಝರ್ಬೈಜಾನ್ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ ಆರ್ ಪ್ರಜ್ಞಾನಂದ ವಿರುದ್ಧ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿದ್ದಾರೆ.
ಟ್ರೋಫಿಯ ಭರವಸೆ ಮೂಡಿಸಿ ಫೈನಲ್ ತಲುಪಿದ್ದ ಆರ್. ಪ್ರಜ್ಞಾನಂದ ಸೋತರೂ ವಿಶ್ವದ ಕ್ರೀಡಾಭಿಮಾನಿಗಳ ಮನಗೆದ್ದರು.
18ರ ಹರೆಯದ ಪ್ರಜ್ಞಾನಂದ, 32ರ ವಯಸ್ಸಿನ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ತೀವ್ರ ಪೈಪೋಟಿ ನೀಡಿದರು. ಎರಡು ದಿನದ ಗೇಮ್‌ಗಳಲ್ಲಿ ಪ್ರಜ್ಞಾನಂದರನ್ನು ಸೋಲಿಸಲು ಕಾರ್ಲ್‌ಸೆನ್ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಟೈ-ಬ್ರೇಕರ್‌ನಲ್ಲಿ ಜಯ ಮುಡಿಗೇರಿಸಿಕೊಂಡರು.
ವಿಶ್ವದ ನಂ.1 ಆಟಗಾರನಿಗೆ ಕಠಿಣ ಹೋರಾಟ ನೀಡಿ ಪ್ರಜ್ಞಾನಂದ ಭಾರತದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದರು. 29ನೇ ಶ್ರೇಯಾಂಕ ಹೊಂದಿದ್ದ ಪ್ರಜ್ಞಾನಂದ, ರನ್ನರ್ ಅಪ್ ಆಗುವ ಮೂಲಕ ಚೆಸ್ ಜಗತ್ತಿನ ಗಮನ ಸೆಳೆದಿದ್ದಾರೆ. ವಿಶ್ವ ನಂಬರ್ ಒನ್ ಕಾರ್ಲ್‌ಸೆನ್ ಚೊಚ್ಚಲ ಚೆಸ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡರು. ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾಗವಹಿಸಿದ ಎರಡನೇ ಭಾರತೀಯ ಮತ್ತು ಕಿರಿಯ ಚೆಸ್ ಆಟಗಾರ.