ಪೆರ್ಲ : ಚೆರ್ಕಳ —ಕಲ್ಲಡ್ಕ ಅಂತರಾಜ್ಯ ರಸ್ತೆಯ ಅಡ್ಕಸ್ಥಳ ಎಂಬಲ್ಲಿನ ಸೇತುವೆ ಬಳಿಕ ಗುರುವಾರ ತಡರಾತ್ರಿ ಅಪಘಾತಕ್ಕೀಡಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದ ಮಣಿಯಂಪಾರೆ ಸಮೀಪದ ಮಣ್ಣಂಗಳ ನಿವಾಸಿ ನೀರೋಳ್ಯದ ಜಾನು ನಾಯ್ಕ್ ಎಂಬವರ ಪುತ್ರ ರೋಶನ್ (27) ಶುಕ್ರವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ವರದಿಯಾಗಿದೆ. ಇಂಜಿನೀಯರಿಂಗ್ ಪದವಿ ಗಳಿಸಿಕೊಂಡಿದ್ದ ಈತ ಮನೆಯಲ್ಲಿಯೇ ವಿದೇಶ ಕಂಪೆನಿಯೊಂದಕ್ಕೆ ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುತ್ತಿದ್ದ. ಈ ನಡುವೆ ಗುರುವಾರ ಮಂಗಳೂರಿನಲ್ಲಿ ಖಾಸಗೀ ಕಂಪೆನಿಯೊಂದರಲ್ಲಿ ಉದ್ಯೋಗ ನೇಮಕದ ನಿಮಿತ್ತ ಇಂಟರ್ ವ್ಯೂಗೆ ತನ್ನ ಸ್ವಂತ ಕಾರಿನಲ್ಲಿ ತೆರಳಿದ್ದು ಸಂಜೆ ಮರಳುವ ವೇಳೆ ವಿಟ್ಲದಲ್ಲಿ ತನ್ನ ಚಿಕ್ಕಪ್ಪನ ಮಡದಿ ಪ್ರಸವಿಸಿದ್ದನ್ನರಿತು ತಾಯಿ ಮಗುವನ್ನು ನೋಡಿ ಆದ ಬಳಿಕ ಮನೆಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಡ್ಕಸ್ಥಳ ಸೇತುವೆಯ ಬದಿಯಲ್ಲಿನ ಆರು ಫಿಲ್ಲರ್ ಗಳಿಗೆ ಬಡಿದುಕೊಂಡು ಬಂದ ಕಾರು ಸ್ಕಿಡ್ಡಾಗಿ ರಸ್ತೆಯಲ್ಲಿಯೇ ಪಲ್ಟಿಯಾಗಿ ಮಗುಚಿ ಬಿದ್ದಿತ್ತು. ತಡ ರಾತ್ರಿಯಾದ ಕಾರಣ ಅಪಘಾತ ಯಾರ ಅರಿವಿಗೂ ಬಾರದಿದ್ದು ಕಾರಿನೊಳಗೆಯೇ ಸಿಲುಕಿದ್ದ ರೋಶನ್ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿಯಲ್ಲಿ ಹಲವು ಗಂಟೆ ಕಳೆದಿದ್ದ. ಬಳಿಕ ರಾತ್ರಿ ಗಸ್ತು ತಿರುಗುವ ಬದಿಯಡ್ಕ ಠಾಣಾ ಪೊಲಿಸರು ಈ ಸ್ಥಳದ ಮೂಲಕ ಹಾದು ಹೋಗುವಾಗಲಷ್ಟೆ ವಿಷಯ ಗಮನಕ್ಕೆ ಬಂದಿತ್ತು. ತಕ್ಷಣ ಪೋಲಿಸರು ಸಮೀಪವಾಸಿಗಳನ್ನೆಬ್ಬಿಸಿ ಅವರ ಸಹಾಯದಿಂದ ರೋಶನ್ ನನ್ನು ಹೊರ ತೆಗೆಯಲು ಗಂಟೆಗಳ ಪ್ರಯತ್ನ ನಡೆಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಬಲವಾದ ಹೊಡೆತ ಬಿದ್ದ ಕಾರಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತನ ಚಿಕಿತ್ಸೆಯ ಬಗ್ಗೆ 24 ಗಂಟೆಗಳ ಅವಧಿ ನೀಡಲಾಗಿತ್ತು. ಆದರೆ ಪ್ರಜ್ಞೆ ಮರುಕಳಿಸದೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಪಘಾತ ಸಂಭವಿಸಿದ ತಕ್ಷಣ ತಲೆಯೊಳಗೆ ಉಂಟಾದ ಅಧಿಕ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ವೈದಾಧಿಕಾರಿಗಳು ತಿಳಿಸಿದ್ದರು.