ಮಂಗಳೂರು: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಅಬ್ದುಲ್ ಅಝೀಜ್(34) ಎಂದು ಗುರುತಿಸಲಾಗಿದೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ನಿಂಗ್ ಸ್ಟಾರ್ ಶಾಲೆಯ ಬಳಿ ಆ. 1ರಂದು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಫ್ಲೇಟ್ ಇಲ್ಲದ ಕಂದು ಬಣ್ಣದ ಸ್ವಿಫ್ಟ್ ಕಾರನ್ನು ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕನು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದಾನೆ. ಇದನ್ನು ಬೆನ್ನತ್ತಿದ ಪೊಲೀಸ್ ಪಡೆ , ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕಾರಿನ ಸವಾರ ಅಬ್ದುಲ್ ಅಜೀಜ್ ಎಂಬಾತ ಅಕ್ರಮವಾಗಿ 230.4 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಚರಸ್ ಅನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟು ಸಾಗಿಸುತ್ತಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು ಕಾರು ಹಾಗೂ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡು, ಆರೋಪಿ ಮಂಗಳೂರಿನ ಅಬ್ದುಲ್ ಅಝೀಜ್(34)ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಇನ್ನಿತರ ಆರೋಪಿಗಳು ಈ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್, ಐಪಿಎಸ್ ರವರ ಮಾರ್ಗದರ್ಶನದಂತೆ, ಡಿಸಿಪಿ ಯವರಾದ ಅಂಶು ಕುಮಾರ್ (ಕಾ&ಸು) ದಿನೇಶ್ ಕುಮಾರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್ ನೇತ್ರತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.