ಉಡುಪಿ: ಉಡುಪಿ- ತೀರ್ಥಹಳ್ಳಿ ಸಂಪರ್ಕಿಸುವ ಆಗುಂಬೆ ಘಾಟಿಯ ಬಿರುಕು ಹಾಗೂ ರಸ್ತೆ ಕುಸಿತ ಹಿನ್ನೆಲೆ ಜು.27 ರಿಂದ ಸೆ.15 ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟಿಯ 6,7 ಹಾಗೂ 11ನೇ ತಿರುವಿನಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡುಬಂದಿದೆ. ಆದ್ದರಿಂದ ರಸ್ತೆ ಮತ್ತಷ್ಟು ಕುಸಿದು ಅಪಘಾತದ ಸಂಭವವಿರುವುದರಿಂದ ತಾತ್ಕಾಲಿಕವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಜು.27ರಿಂದ ಸೆಪ್ಟಂಬರ್ 15ರವರೆಗೆ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಲಘು ವಾಹನಗಳ ಸಂಚಾರಕ್ಕೆ ಮಾತ್ರ ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಭಾರೀ ವಾಹನಗಳು ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಾಘಾಟ್- ಕಾರ್ಕಳ- ಉಡುಪಿ ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಸಿದ್ಧಾಪುರ- ಕುಂದಾಪುರ- ಉಡುಪಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.