ಬೆಳ್ತಂಗಡಿ : ಆಡುತ್ತಿದ್ದ ವೇಳೆ ಕತ್ತಿಗೆ ಉಯ್ಯಾಲೆಯ ಹಗ್ಗ ಬಿಗಿದು 14 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ದಿಡುಪೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬುವರ ಪುತ್ರ 8ನೇ ತರಗತಿ ವಿದ್ಯಾರ್ಥಿ ಶ್ರೀಷಾ (14) ಮೃತಪಟ್ಟ ಬಾಲಕ. ಈತ ಮನೆಯಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಬಿಗಿದು ನೆಲಕ್ಕೆ ಬಿದ್ದಿದ್ದಾನೆ. ಇದನ್ನು ಆತನ ಸಹೋದರಿ ನೋಡಿ ಮನೆಮಂದಿಗೆ ತಂದೆಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕ ಶ್ರೀಷಾ ಸಾವನ್ನಪ್ಪಿದ್ದಾನೆ. ಬಾಲಕನ ಮೃತದೇಹದ ಮಹಜರಿಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.