ನವದೆಹಲಿ: ವಿದ್ಯುತ್ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ಭಾನುವಾರ ಮುಂಜಾನೆ (ಜೂ.25 ರಂದು) ನಡೆದಿದೆ.
ಸಾಕ್ಷಿ ಅಹುಜಾ ಎಂಬ ಮಹಿಳೆ ಭಾನುವಾರ ಮುಂಜಾನೆ 5:30 ರ ಹೊತ್ತಿಗೆ ಭೋಪಾಲ್‌ಗೆ ಹೋಗುವ ರೈಲು ಹತ್ತಲು ತನ್ನ ಸಹೋದರಿ ಮತ್ತು ಮೂವರು ಮಕ್ಕಳೊಂದಿಗೆ ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದಾರೆ.
ಕಳೆದ ಕೆಲ ದಿನಗಳಿಂದ ವಿಪರೀತ ಮಳೆಯಾಗುತ್ತಿರುವುದರಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ರೈಲ್ವೇ ನಿಲ್ದಾಣದ ನೀರಿನ ರಸ್ತೆಯನ್ನು ದಾಟುತ್ತಿದ್ದ ಆಧಾರವಾಗಿ ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಈ ವೇಳೆ ಕಂಬದಿಂದ ಸಾಕ್ಷಿ ಅವರಿಗೆ ವಿದ್ಯುತ್ ಪ್ರವೇಶಿಸಿದೆ. ಸ್ಥಳೀಯರು ಕೂಡಲೇ ಮಹಿಳೆಯ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ರವಾನಿಸದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಕ್ಷಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದಾಗ ಕೆಲವು ತಂತಿಗಳು ವಿದ್ಯುತ್ ಕಂಬದಿಂದ ಹೊರಕ್ಕೆ ಚಾಚಿಕೊಂಡಿದ್ದವು ಎಂದು ಹೇಳಿದ್ದಾರೆ.
ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 287 ಮತ್ತು 304 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಘಟನೆಗೆ ಯಾರ ನಿರ್ಲಕ್ಷ್ಯ ಕಾರಣವಾಯಿತು ಎಂಬುದನ್ನು ನಿರ್ಧರಿಸಲು ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದೆ.