Home ತಾಜಾ ಸುದ್ದಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಳಿನ್ ಕುಮಾರ್ ಕಟೀಲ್

0

ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ್ದಾರೆ.


ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಈಗಾಗಲೇ ನಾನು ಲಿಖಿತ ಹಾಗೂ ಮೌಖಿಕವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನ ಎರಡು ವರ್ಷದ ಅವಧಿ ಮುಗಿದಿದೆ. ಅದರ ಬೆನ್ನಲ್ಲಿಯೇ ನಾನು ರಾಜೀನಾಮೆಯನ್ನೂ ನೀಡಿದ್ದೇನೆ. ಈಗಾಗಲೇ ರಾಜೀನಾಮೆ ಪತ್ರವನ್ನು ಲಿಖಿತವಾಗಿಯೂ ಕಳಿಸಿದ್ದೇನೆ ಎಂದಿದ್ದಾರೆ.

ಸ್ಥಾನಕ್ಕೆ ರೇಸ್: ಬಿಜೆಪಿಯಲ್ಲಿ ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರೇಸ್ ಆರಂಭವಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಅವರು ಶುಕ್ರವಾರ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ ಮಾಜಿ ಸಚಿವ ವಿ.ಸೋಮಣ್ಣ ವರಿಷ್ಠರಿಗೆ ಪತ್ರ ಬರೆದಿದ್ದಾರೆ.

ವರಿಷ್ಠರಿಗೆ ಪತ್ರ ಬರೆದಿರುವ ಬಗ್ಗೆ ಖುದ್ದು ವಿ.ಸೋಮಣ್ಣನವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಪ್ರತಿಪಾದಿಸಿದ್ದಾರೆ. ನಾನು ಚುನಾವಣೆ ಮುಗಿದ ಬಳಿಕ ದೆಹಲಿಗೆ ಎರಡು ಬಾರಿ ಭೇಟಿ ನೀಡಿದ್ದೇನೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಜೊತೆಗೆ ವರಿಷ್ಠರಿಗೆ ಈ ಸಂಬಂಧ ಪತ್ರವನ್ನೂ ಬರೆದಿದ್ದೇನೆ. ನಾನು ಬಿಜೆಪಿಗೆ ಬಂದು 15 ವರ್ಷವಾಗಿದೆ. ಪಕ್ಷ ನನಗೆ ಸ್ಥಾನಮಾನ ನೀಡಿದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.

ಚಿಂಚೋಳಿ, ಹಾನಗಲ್ , ಬಸವಕಲ್ಯಾಣ, ಸಿಂದಗಿ, ಮಸ್ಕಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ನಾನು ಕೆಲಸ ಮಾಡಿದ್ದೇನೆ. ರಾಜ್ಯಾಧ್ಯಕ್ಷ ಹುದ್ದೆ ಉದ್ಯೋಗ ಅಲ್ಲ. ನಾನು ನನ್ನ ಅನುಭವ ಬಳಸಿ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಪ್ರಧಾನಿ ಹೊರತು ಪಡಿಸಿ ಅಮಿತ್‌ ಶಾ, ಜೆ.ಪಿ. ನಡ್ಡಾ , ಬಿ.ಎಲ್‌.ಸಂತೋಷ್‌ ಎಲ್ಲರನ್ನೂ ಭೇಟಿ ಮಾಡಿದ್ದೇನೆ ಎಂದರು.

ಯಡಿಯೂರಪ್ಪ ರಾಷ್ಟ್ರೀಯ ನಾಯಕರು, ಸಂಸದೀಯ ಮಂಡಳಿ ಸದಸ್ಯರು. ಯಡಿಯೂರಪ್ಪ ಮನೆಗೂ ಹೋಗುತ್ತೇನೆ. ಅವರೆಲ್ಲರೂ ಕೊಟ್ಟ ಟಾಸ್ಕ ನ್ನು ನಾನು ಒಪ್ಪಿ ಮಾಡಿಲ್ವಾ ? ನಾನು 24/7 ಕೆಲಸ ಮಾಡುತ್ತಿದ್ದವನು. ಈಗ ಕೆಲಸ ಇಲ್ಲದಾಗಿದೆ. ನಾನು ಎಲ್ಲರನ್ನೂ ನಂಬಿಕೆಯಿಂದ ತೆಗೆದುಕೊಂಡು ಹೋಗುತ್ತೇನೆ. ನನ್ನಷ್ಟು ಓಪನ್‌ ಯಾರೂ ಇಲ್ಲ. ನನಗೆ ಅವಕಾಶ ನೀಡಿದರೆ ಗಾಂಭೀರ್ಯದಿಂದ ಕೆಲಸ ಮಾಡುತ್ತೇನೆ. ನೂರು ದಿನ ನನಗೆ ಅವಕಾಶ ಕೊಟ್ಟು ನೋಡಿ, ಕೆಲಸ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here